ದೇಶ

ಛತ್ತೀಸ್‌ಗಢದಲ್ಲಿ 36 ದಿನಗಳ ಸುದೀರ್ಘ ಕಾರ್ಯಾಚರಣೆ ಬಳಿಕ ಕೊನೆಗೂ 'ನರಭಕ್ಷಕ' ಚಿರತೆ ಸೆರೆ

Ramyashree GN

ರಾಯಪುರ: ಬುಧವಾರ ಬೆಳಗ್ಗೆ ಮೂವರು ಗ್ರಾಮಸ್ಥರನ್ನು ಕೊಂದು ತಪ್ಪಿಸಿಕೊಂಡಿದ್ದ ನರಭಕ್ಷಕ ಚಿರತೆ ಕೊನೆಗೂ ರಾಯಪುರದಿಂದ ಸುಮಾರು 350 ಕಿ.ಮೀ ದೂರದಲ್ಲಿರುವ ಮನೇಂದ್ರಗಢದಲ್ಲಿ ಇರಿಸಲಾಗಿದ್ದ ಬೋನಿನೊಳಗೆ ಸೆರೆಯಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಬರೋಬ್ಬರಿ 36 ದಿನಗಳಿಂದ ಅರಣ್ಯ ಇಲಾಖೆ ಮತ್ತು ಜಿಲ್ಲಾಡಳಿತದ ಅಧಿಕಾರಿಗಳಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ 'ನರಭಕ್ಷಕ' ಚಿರತೆಯನ್ನು ಸೆರೆಹಿಡಿಯಲಾಗಿದೆ. ಈ ಸಮಯದಲ್ಲಿ ಅದು ಮೂರು ಜನರನ್ನು ಕೊಂದು ಇತರ ಇಬ್ಬರನ್ನು ಗಂಭೀರವಾಗಿ ಗಾಯಗೊಳಿಸಿತ್ತು.

ಚಿರತೆಯನ್ನು ಸೆರೆ ಹಿಡಿಯಲು ಆಡು, ಹುಂಜ ಮತ್ತು ನಾಯಿಗಳನ್ನು ಬೋನಿನಲ್ಲಿಟ್ಟು ಆಮಿಷವೊಡ್ಡಿ ಕ್ಯಾಮೆರಾ ಅಳವಡಿಸಿ ಡ್ರೋನ್‌ಗಳನ್ನು ಬಳಸಿ ಪತ್ತೆ ಹಚ್ಚಿದರೂ ಏನೂ ಪ್ರಯೋಜನವಾಗಿರಲಿಲ್ಲ. ಆದರೆ, ಮಂಗಳವಾರ ಎರಡು ಆನೆಗಳನ್ನು ಬಳಸಿಕೊಂಡು ಆ ಪ್ರದೇಶದಲ್ಲಿ ಪತ್ತೆಯಾದ ಹೆಜ್ಜೆ ಗುರುತುಗಳ ಆಧಾರದ ಮೇಲೆ ಚಿರತೆಯನ್ನು ಹಿಂಬಾಲಿಸಲು ತಜ್ಞರು ಕಾರ್ಯಾಚರಣೆ ಕೈಗೊಂಡರು.

ಸಿಕ್ಕಿಬಿದ್ದ ಚಿರತೆಯನ್ನು ಬಿಲಾಸ್‌ಪುರ ಜಿಲ್ಲೆಯ ಕಾನನ್ ಪೆಂಡಾರಿ ಝೂಲಾಜಿಕಲ್ ಪಾರ್ಕ್‌ಗೆ ಸ್ಥಳಾಂತರಿಸುವ ಸಾಧ್ಯತೆ ಇದೆ.
ಭಯಭೀತರಾದ ಗ್ರಾಮಸ್ಥರು ತಮ್ಮ ಮನೆಗಳಿಂದ ಹೊರಬರುವುದನ್ನು ನಿಲ್ಲಿಸಿದ್ದರು. ಈ ಪ್ರದೇಶದ ಶಾಲೆಗಳಲ್ಲಿ ಹಾಜರಾತಿ ಅತ್ಯಲ್ಪವಾಗಿತ್ತು ಎಂದು ಸ್ಥಳೀಯ ಪತ್ರಕರ್ತ ಚಂದ್ರಕಾಂತ್ ಪರ್ಗೀರ್ ಹೇಳಿದರು.

ಚಿರತೆ ದಾಳಿಗೆ ಬಲಿಯಾದ ಗ್ರಾಮಸ್ಥರಲ್ಲಿ ಇಬ್ಬರು ಮಹಿಳೆಯರು ಹಾಗೂ ಓರ್ವ ಪುರುಷ ಸೇರಿದ್ದಾರೆ.

ಸಂತ್ರಸ್ತರ ಕುಟುಂಬಕ್ಕೆ ತಕ್ಷಣವೇ 25,000 ರೂಪಾಯಿ ಪರಿಹಾರ ನೀಡಲಾಗಿದೆ. ಉಳಿದ 5.75 ಲಕ್ಷ ರೂ.ಗಳನ್ನು ಔಪಚಾರಿಕ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಪ್ರತಿಯೊಬ್ಬರಿಗೂ ವಿತರಿಸಲಾಗುವುದು ಎಂದು ಹಿರಿಯ ಅರಣ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ

SCROLL FOR NEXT