ದೇಶ

ವಿಧಾನಸಭೆ ಚುನಾವಣೆ ವೇಳೆ ಪಕ್ಷ ವಿರೋಧಿ ಚಟುವಟಿಕೆ ಆರೋಪ; ಗುಜರಾತ್ ಕಾಂಗ್ರೆಸ್ ನ 38 ಮಂದಿ ಅಮಾನತು!

Srinivasamurthy VN

ಅಹ್ಮದಾಬಾದ್: ಗುಜರಾತ್ ವಿಧಾನಸಭೆ ಚುನಾವಣೆ ವೇಳೆ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಪಾಲ್ಗೊಂಡ ಆರೋಪದ ಮೇರೆಗೆ 38 ಮಂದಿ ಸದಸ್ಯರನ್ನು ಕಾಂಗ್ರೆಸ್ ಅಮಾನತು ಮಾಡಿದೆ.

ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ 'ಪಕ್ಷ ವಿರೋಧಿ ಚಟುವಟಿಕೆ'ಯಲ್ಲಿ ತೊಡಗಿದ್ದಕ್ಕಾಗಿ ತನ್ನ 38 ಕಾರ್ಯಕರ್ತರು ಮತ್ತು ನಾಯಕರನ್ನು ಆರು ವರ್ಷಗಳ ಕಾಲ ಅಮಾನತುಗೊಳಿಸಲಾಗಿದೆ ಎಂದು ಗುಜರಾತ್ ಕಾಂಗ್ರೆಸ್ ಹೇಳಿದೆ. ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ 182 ಸದಸ್ಯ ಬಲದ ಹಳೆಯ ಪಕ್ಷ ಕೇವಲ 17 ಸ್ಥಾನಗಳನ್ನು ಮಾತ್ರ ಗೆಲ್ಲಲು ಸಾಧ್ಯಾವಾಗಿತ್ತು. 

ಗುಜರಾತ್ ಕಾಂಗ್ರೆಸ್‌ನ ಶಿಸ್ತು ಸಮಿತಿಯು ಈ ತಿಂಗಳು ಎರಡು ಬಾರಿ ಸಭೆ ನಡೆಸಿದ್ದು, ಇದುವರೆಗೆ 95 ಜನರ ವಿರುದ್ಧ 71 ದೂರುಗಳು ಬಂದಿವೆ ಎಂದು ಅದರ ಸಂಚಾಲಕ ಬಾಲುಭಾಯ್ ಪಟೇಲ್ ಸುದ್ದಿಗಾರರಿಗೆ ತಿಳಿಸಿದರು. 

"ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ನಾವು 38 ಕಾರ್ಯಕರ್ತರು ಮತ್ತು ನಾಯಕರನ್ನು ಅಮಾನತುಗೊಳಿಸಿದ್ದೇವೆ. ಇತರರ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗುವುದು. ಎಂಟು ಕಾರ್ಯಕರ್ತರಿಗೆ ಎಚ್ಚರಿಕೆ ನೀಡಲಾಗಿದೆ. ಸುರೇಂದ್ರನಗರ ಜಿಲ್ಲಾಧ್ಯಕ್ಷ ರಾಯಭಾಯ್ ರಾಥೋಡ್, ನರ್ಮದಾ ಜಿಲ್ಲಾಧ್ಯಕ್ಷ ಹರೇಂದ್ರ ವಲಂದ್ ಮತ್ತು ನಂದೋದ್ ಮಾಜಿ ಶಾಸಕ ಪಿ ಡಿ ವಾಸವ ಸೇರಿದಂತೆ 38 ಮಂದಿಯನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ ಎಂದು ಅವರು ಹೇಳಿದರು.

ಕಳೆದ ವರ್ಷ ಡಿಸೆಂಬರ್ 1 ಮತ್ತು 5 ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಭರ್ಜರಿ ಜಯ ದಾಖಲಿಸಿ 156 ಸ್ಥಾನಗಳನ್ನು ಪಡೆದು ರಾಜ್ಯದಲ್ಲಿ ಅಧಿಕಾರ ಉಳಿಸಿಕೊಂಡಿತ್ತು.
 

SCROLL FOR NEXT