ದೇಶ

ಎಂಜಿನಿಯರಿಂಗ್, ಮೆಡಿಸಿನ್ ನಂತಹ ವಿಷಯಗಳನ್ನು ಮಾತೃಭಾಷೆಯಲ್ಲಿ ಕಲಿಸಿ ಸ್ಥಳೀಯ ಭಾಷೆಗಳ ಬೆಳವಣಿಗೆಗೆ ಸರ್ಕಾರ ಒತ್ತು: ಪಿಎಂ ಮೋದಿ

Sumana Upadhyaya

ನವದೆಹಲಿ: ಭಾರತವು ಹಲವು ಭಾಷೆಗಳನ್ನು ಹೊಂದಿದೆ, ಅದು ನಮ್ಮ ಸಾಂಸ್ಕೃತಿಕ ಕಂಪನ್ನು ಹೆಚ್ಚಿಸುತ್ತದೆ. ಆಯಾ ಸ್ಥಳೀಯ ಮಾತೃ ಭಾಷೆಯಲ್ಲಿ ಎಂಜಿನಿಯರಿಂಗ್ ಮತ್ತು ವೈದ್ಯಕೀಯದಂತಹ ಉನ್ನತ ಶಿಕ್ಷಣ ವಿಷಯಗಳನ್ನು ಅಧ್ಯಯನ ಮಾಡುವ ಆಯ್ಕೆಯನ್ನು ನೀಡುವುದು ಸೇರಿದಂತೆ ಭಾರತೀಯ ಭಾಷೆಗಳನ್ನು ಪ್ರೋತ್ಸಾಹಿಸಲು ಕೇಂದ್ರ ಸರ್ಕಾರವು ಹಲವು ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿಗಳು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರ ಮಾತುಗಳ ವಿಡಿಯೊವನ್ನು ಶೇರ್ ಮಾಡಿದ್ದಾರೆ. ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ, ಗೌರವಾನ್ವಿತ ಸಿಜೆಐ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಪ್ರಾದೇಶಿಕ ಭಾಷೆಗಳಲ್ಲಿ ಸುಪ್ರೀಂ ಕೋರ್ಟ್ ತೀರ್ಪುಗಳು ಲಭ್ಯವಾಗುವಂತೆ ಕೆಲಸ ಮಾಡುವ ಅಗತ್ಯತೆಯ ಕುರಿತು ಮಾತನಾಡಿದ್ದಾರೆ. ಅದಕ್ಕೆ ತಂತ್ರಜ್ಞಾನವನ್ನೂ ಬಳಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಇದು ಶ್ಲಾಘನೀಯ ವಿಷಯವಾಗಿದೆ. ಇದು ಅನೇಕ ಮಂದಿಗೆ ವಿಶೇಷವಾಗಿ ಯುವಕರಿಗೆ ಸಹಾಯ ಮಾಡುತ್ತದೆ ಎಂದಿದ್ದಾರೆ.

ಪ್ರತಿ ಭಾರತೀಯ ಭಾಷೆಯಲ್ಲಿ ಸುಪ್ರೀಂ ಕೋರ್ಟ್ ತೀರ್ಪುಗಳ ಅನುವಾದಿತ ಪ್ರತಿಗಳನ್ನು ಒದಗಿಸುವುದು ನಮ್ಮ ಮುಂದಿನ ಹಂತದ ಧ್ಯೇಯವಾಗಿದೆ. ನಮ್ಮ ನಾಗರಿಕರಿಗೆ ಅರ್ಥವಾಗುವ ಭಾಷೆಯಲ್ಲಿ ನಾವು ತಲುಪದ ಹೊರತು, ನಾವು ಮಾಡುತ್ತಿರುವ ಕೆಲಸ ಶೇಕಡಾ 99 ಮಂದಿಗೆ ತಲುಪುವುದಿಲ್ಲ ಎಂದು ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಹೇಳಿದ್ದಾರೆ.

SCROLL FOR NEXT