ದೇಶ

ಈಗಲೂ ಶಾರುಖ್ ಖಾನ್ ಬಗ್ಗೆ ಹೆಚ್ಚು ಗೊತ್ತಿಲ್ಲ, ನಾನು ಸಿನಿಮಾ ನೋಡೋದೆ ಕಡಿಮೆ: ಅಸ್ಸಾಂ ಸಿಎಂ

Lingaraj Badiger

ಗುವಾಹಟಿ: ಒಂದು ಬಾರಿ "ಶಾರುಖ್ ಖಾನ್ ಯಾರು" ಎಂದು, ಮತ್ತೊಂದು ಬಾರಿ  "ಶಾರುಖ್ ಖಾನ್ ನನಗೆ ಕರೆ ಮಾಡಿದ್ದರು" ಎಂದು ಹೇಳುವ ಮೂಲಕ ತೀವ್ರ ಟೀಕೆಗೆ ಗುರಿಯಾಗಿದ್ದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು, ಈಗಲೂ ಶಾರುಖ್ ಖಾನ್ ಬಗ್ಗೆ ಹೆಚ್ಚು ಗೊತ್ತಿಲ್ಲ, ನಾನು ಸಿನಿಮಾ ನೋಡೋದೆ ಕಡಿಮೆ ಎಂದು ಸೋಮವಾರ ಹೇಳಿದ್ದಾರೆ.

ಬಾಲಿವುಡ್ ನಟನ ಬಗ್ಗೆ ನನಗೆ ಹೆಚ್ಚು ಗೊತ್ತಿಲ್ಲ ಮತ್ತು ನಾನು ಚಲನಚಿತ್ರಗಳನ್ನು ನೋಡುವುದು ಕಡಿಮೆ. ಆದರೆ ಹಿಂದಿ ಚಿತ್ರೋದ್ಯಮದ ಬಗ್ಗೆ ಸ್ವಲ್ಪ ಗೊತ್ತು ಎಂದು ಅಸ್ಸಾಂ ಸಿಎಂ ಸ್ಪಷ್ಟಪಡಿಸಿದ್ದಾರೆ.

"ನಾನು ಅಮಿತಾಬ್ ಬಚ್ಚನ್, ಧರ್ಮೇಂದ್ರ ಮತ್ತು ಜೀತೇಂದ್ರ ಅವರ ಚಿತ್ರಗಳನ್ನು ನೋಡಿದ್ದೇನೆ. ನನಗೆ ಇನ್ನೂ ಶಾರುಖ್ ಖಾನ್ ಬಗ್ಗೆ ಹೆಚ್ಚು ತಿಳಿದಿಲ್ಲ. 2001 ರಿಂದ ನಾನು ಆರು ಅಥವಾ ಏಳಕ್ಕಿಂತ ಹೆಚ್ಚು ಚಿತ್ರಗಳನ್ನು ನೋಡಿಲ್ಲ" ಎಂದು ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಶಾರುಖ್ ಖಾನ್ ಅವರೊಂದಿಗಿನ ಸಂಭಾಷಣೆಯ ಕುರಿತು ಮಾತನಾಡಿದ ಶರ್ಮಾ, ಶನಿವಾರ ಸಂಜೆ 7:40ಕ್ಕೆ ಬಾಲಿವುಡ್ ನಟನಿಂದ ಒಂದು ಮೆಸೇಜ್ ಬಂತು. ಅದರಲ್ಲಿ "'ನಾನು ಶಾರುಖ್ ಖಾನ್. ನಾನು ನಿಮ್ಮೊಂದಿಗೆ ಮಾತನಾಡಲು ಬಯಸುತ್ತೇನೆ" ಎಂದು ತಿಳಿಸಲಾಗಿತ್ತು.

"ನನ್ನೊಂದಿಗೆ ಮಾತನಾಡಲು ಬಯಸಿ ಹಲವರು ಮೆಸೇಜ್ ಮಾಡಿದ್ದರು. ಅವುಗಳನ್ನು ಮುಗಿಸಿದ ನಂತರ, ಭಾನುವಾರ ಬೆಳಗಿನ ಜಾವ 2 ಗಂಟೆಗೆ ಅವರಿಗೆ(ಶಾರುಖ್) ನಾನು ಕರೆಗೆ ಲಭ್ಯವಿದ್ದೇನೆ ಎಂದು ಒಂದು ಸಂದೇಶ ಕಳುಹಿಸಲಾಯಿತು. ನಂತರ ಅವರು ನನಗೆ ಕರೆ ಮಾಡಿ ತಮ್ಮ ಚಿತ್ರ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಮತ್ತು ಯಾವುದೇ ತೊಂದರೆಯಾಗುವುದಿಲ್ಲ ಎಂದು ಆಶಿಸುವುದಾಗಿ ಹೇಳಿದರು.

"ನಾನು ಅವರ ಚಿತ್ರದ ಹೆಸರನ್ನು ಕೇಳಿದೆ ಮತ್ತು ಅವರು ಪಠಾಣ್ ಎಂದು ಹೇಳಿದರು. ನಾನು ಅವರಿಗೆ 'ಕೋಯಿ ಅಡಚಣ್  ನಹೀ ಹೋಗಾ' (ಯಾವುದೇ ತೊಂದರೆಯಾಗುವುದಿಲ್ಲ)" ಎಂದು ಭರವಸೆ ನೀಡಿರುವುದಾಗಿ ಸಿಎಂ ತಿಳಿಸಿದರು.

ಪಠಾಣ್ ಚಿತ್ರಕ್ಕೆ ಬಹಿಷ್ಕಾರ ಹಾಕಿದ ಬಗ್ಗೆ ಪ್ರತಿಕ್ರಿಯಿಸಿದ ಶರ್ಮಾ, ಚಿತ್ರವನ್ನು ವೀಕ್ಷಿಸಲು ಸಿದ್ಧರಿರುವವರು ನೋಡಬಹುದು. ಬೇಡ ಎನ್ನುವವರು ಬಿಟ್ಟುಬಿಡಬಹುದು ಎಂದು ಹೇಳಿದರು.

SCROLL FOR NEXT