ದೇಶ

ಸೂರತ್ ಹಿಟ್ ಅಂಡ್ ರನ್ ಕೇಸ್: 12 ಕಿ.ಮೀ ದೂರ ಮೃತದೇಹ ಎಳೆದೊಯ್ದ ಕಾರು; ವಿಡಿಯೋ ವೈರಲ್

Nagaraja AB

ಅಹಮದಾಬಾದ್: ದೆಹಲಿಯಲ್ಲಿ ಇತ್ತೀಚಿಗೆ ಕುಡಿದ ಅಮಲಿನಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆಯನ್ನು ಕಾರಿನಲ್ಲಿ ಎಳೆದೊಯ್ದ ಘಟನೆ ಜನರ ಮನಸ್ಸಿನಿಂದ ಮಾಸಿಲ್ಲ. ಈ ನಡುವೆ ಗುಜರಾತ್ ನ ಸೂರತ್ ನಲ್ಲಿ ಇಂತಹದ್ದೇ ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ಅಪಘಾತ ಸಂಭವಿಸಿದ ಸ್ಥಳದಿಂದ ಸುಮಾರು 12 ಕಿ.ಮೀ ದೂರದವರೆಗೂ ಮೃತದೇಹವನ್ನು ಕಾರಿನಲ್ಲಿ ಎಳೆದೊಯ್ಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಜನವರಿ 18 ರಂದು ಈ ಅಪಘಾತ ಸಂಭವಿಸಿದ್ದು, ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ದಂಪತಿಗೆ ಕಾರು ಡಿಕ್ಕಿ ಹೊಡೆದಿದೆ. ವೇಗವಾಗಿ ಬಂದು ಅಪಘಾತಕ್ಕೆ ಕಾರಣವಾದ ಕಾರಿನ ವಿಡಿಯೋ ವೈರಲ್ ಆದ ಬಳಿಕ ದುಷ್ಕರ್ಮಿಗಳನ್ನು ಪತ್ತೆ ಹಚ್ಚಲಾಗಿದೆ. 
ಸಮರಿತನ್ ಎಂಬುವರ ಕಾರಿನ ವಿಡಿಯೋವನ್ನು ಸೂರತ್ ಗ್ರಾಮಾಂತರ ಪೊಲೀಸರೊಂದಿಗೆ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಮೃತನ ಪತ್ನಿ ಅಶ್ವಿನಿ ಪಾಟೀಲ್  ಕಳೆದ ನಾಲ್ಕು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳೀಯ ಮಾಧ್ಯಮವೊಂದರಲ್ಲಿ ಮಾತನಾಡಿರುವ ಅವರು, ರಾತ್ರಿ 10 ಗಂಟೆ ಸುಮಾರಿನಲ್ಲಿ ನನ್ನ ಪತಿ ಹಾಗೂ ನಾನು ಸೂರತ್ ಗೆ ಬಂದಾಗ ಇದ್ದಕ್ಕಿದ್ದಂತೆ ಕಾರೊಂದು ಹಿಂದಿನಿಂದ ಡಿಕ್ಕಿ ಹೊಡೆಯಿತು. ನಾನು ವಾಹನದಿಂದ ಬಿದ್ದೆ; ಅದೃಷ್ಟವಶಾತ್, ಸುತ್ತಮುತ್ತಲಿನ ಜನರು  ಸಹಾಯ ಮಾಡಲು ಬಂದರು. ಕತ್ತಲೆಯಲ್ಲಿ ರಸ್ತೆಯಲ್ಲಿ ನನ್ನ ಗಂಡನಿಗಾಗಿ ಹುಡುಕಿದರು. ಆದರೆ, ಅವರು ಪತ್ತೆಯಾಗಲೇ ಇಲ್ಲ ಎಂದು ತಿಳಿಸಿದ್ದಾರೆ. 

ಶಂಕಿತ ಕಾರಿನ ವಿಡಿಯೋವನ್ನು ನೆಟ್ಟಿಗರು ವಾಟ್ಸಾಪ್ ನಲ್ಲಿ ಹಂಚಿಕೊಂಡ ನಂತರ ಆರೋಪಿಯನ್ನು ಪತ್ತೆ ಹಚ್ಚಲಾಗಿದ್ದು, ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದು ಎಸ್ ಪಿ ಹಿತೇಶ್ ಜಯ್ಸಾರ್ ತಿಳಿಸಿದ್ದಾರೆ. 

SCROLL FOR NEXT