ದೇಶ

ಲಖಿಂಪುರ ಖೇರಿ ಪ್ರಕರಣ: ಕೇಂದ್ರ ಸಚಿವರ ಪುತ್ರ ಆಶೀಶ್ ಮಿಶ್ರಾಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು

Srinivasamurthy VN

ನವದೆಹಲಿ: ಲಖಿಂಪುರ ಖೇರಿ ರೈತರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶೀಶ್ ಮಿಶ್ರಾಗೆ  ಸುಪ್ರೀಂ ಕೋರ್ಟ್ ಬುಧವಾರ  ಮಧ್ಯಂತರ ಜಾಮೀನು ಮಂಜೂರು ಮಾಡಿದೆ. 

 2021 ರ ಅಕ್ಟೋಬರ್‌ನಲ್ಲಿ ಐದು ಜನ ರೈತರ ಹತ್ಯೆಗೆ ಕಾರಣವಾಗಿರುವ  ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಬುಧವಾರ ಎಂಟು ವಾರಗಳ ಅವಧಿಗೆ ಮಿಶ್ರಾಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

ಮಧ್ಯಂತರ ಜಾಮೀನಿನ ಒಂದು ವಾರದೊಳಗೆ ಉತ್ತರ ಪ್ರದೇಶ ರಾಜ್ಯವನ್ನು ತೊರೆಯುವಂತೆ ಕೋರ್ಟ್ ಮಿಶ್ರಾಗೆ ನಿರ್ದೇಶನ ನೀಡಿದೆ ಹಾಗೂ  ಮಧ್ಯಂತರ ಜಾಮೀನಿನ ಅವಧಿಯಲ್ಲಿ ಉತ್ತರಪ್ರದೇಶ ರಾಜ್ಯ ಅಥವಾ ದೆಹಲಿ ಎನ್‌ಸಿಟಿಯಲ್ಲಿ ಉಳಿಯದಂತೆ ನಿರ್ದೇಶಿಸಿದೆ. 

ಅಲ್ಲದೆ ತನ್ನ ಪಾಸ್‌ಪೋರ್ಟ್ ಅನ್ನು ಒಪ್ಪಿಸಬೇಕು ಹಾಗೂ  ನ್ಯಾಯಾಲಯದ ವಿಚಾರಣೆಗೆ ಹಾಜರಾಗಲು ಮಾತ್ರ ಉತ್ತರಪ್ರದೇಶ ರಾಜ್ಯವನ್ನು ಪ್ರವೇಶಿಸಬಹುದು. ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಮಿಶ್ರಾ ಅವರ ಕುಟುಂಬದ ಸದಸ್ಯರು ಮಾಡುವ ಯಾವುದೇ ಪ್ರಯತ್ನವು ಜಾಮೀನು ರದ್ದತಿಗೆ ಕಾರಣವಾಗುತ್ತದೆ ಎಂದು ಸುಪ್ರೀಕೋರ್ಟ್ ತಿಳಿಸಿದೆ ಎಂದು Live Law ವರದಿ ಮಾಡಿದೆ.

ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಹಾಗೂ  ಜೆ.ಕೆ. ಮಹೇಶ್ವರಿ ಅವರನ್ನೊಳಗೊಂಡ ಪೀಠವು ಮಿಶ್ರಾ ಸಲ್ಲಿಸಿದ ಖಾಯಂ ಜಾಮೀನು ಅರ್ಜಿಯನ್ನು ಬಾಕಿ ಇರಿಸಲು ನಿರ್ಧರಿಸಿತು ಹಾಗೂ  ಮಿಶ್ರಾಗೆ  ಮಧ್ಯಂತರ ಜಾಮೀನು ನೀಡಿತು.

ಕೇಂದ್ರ ಸರ್ಕಾರದ  ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರೈತರ ಗುಂಪಿನ ಮೇಲೆ ಮಿಶ್ರಾ ಅವರ ಬೆಂಗಾವಲು ವಾಹನ ಹರಿದು ರೈತರು ಮೃತಪಟ್ಟಿದ್ದರು.
 

SCROLL FOR NEXT