ದೇಶ

ಕಾಶ್ಮೀರದಲ್ಲಿ ನಡೆಯಲು ಬಿಜೆಪಿ ನಾಯಕರಿಗೆ ಭಯ; ಅಮಿತ್ ಶಾ ಶ್ರೀನಗರದಲ್ಲಿ ಪಾದಯಾತ್ರೆ ಮಾಡಲಿ: ರಾಹುಲ್ ಸವಾಲು

Lingaraj Badiger

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಕಾನೂನು ಸುವ್ಯವಸ್ಥೆ ಸರಿ ಇದೆ ಎನ್ನುವುದಾದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜಮ್ಮುವಿನಿಂದ ಶ್ರೀನಗರದ ಲಾಲ್ ಚೌಕ್‌ ವರೆಗೆ ಪಾದಯಾತ್ರೆ ಮಾಡಲಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸೋಮವಾರ ಸವಾಲು ಹಾಕಿದ್ದಾರೆ.

ಇಂದು ಶ್ರೀನಗರದಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಕಾಶ್ಮೀರದ ಬೀದಿಗಳಲ್ಲಿ ನಡೆಯಲು ಯಾವುದೇ ಬಿಜೆಪಿ ನಾಯಕರಿಗೂ ಸಾಧ್ಯವಿಲ್ಲ. ಏಕೆಂದರೆ ಅವರಿಗೆ ಭಯ ಇದೆ ಎಂದಿದ್ದಾರೆ.

ಕೇಂದ್ರಾಡಳಿತ ಪ್ರದೇಶದಲ್ಲಿ ಪರಿಸ್ಥಿತಿ ಉತ್ತಮವಾಗಿದ್ದರೆ ಅಮಿತ್ ಶಾ ಮತ್ತು ಇತರ ಬಿಜೆಪಿ ನಾಯಕರ ಜಮ್ಮುವಿನಿಂದ ಲಾಲ್ ಚೌಕ್‌ವರೆಗೆ ಪಾದಯಾತ್ರೆ ಕೈಗೊಳ್ಳಲಿ ಎಂದು ರಾಹುಲ್ ಗಾಂಧಿ ಸವಾಲು ಹಾಕಿದರು.

"ಜಮ್ಮು ಮತ್ತು ಕಾಶ್ಮೀರದಲ್ಲಿ ಉದ್ದೇಶಿತ ಹತ್ಯೆಗಳು ಮತ್ತು ಬಾಂಬ್ ಸ್ಫೋಟಗಳು ನಡೆಯುತ್ತಿವೆ. ಜನ ನಿತ್ಯವೂ ಭಯದಲ್ಲಿ ಜೀವನ ಮಾಡುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಸರಿ ಇಲ್ಲ. ನಮ್ಮ ಯಾತ್ರೆಗೆ ಸೂಕ್ತ ಭದ್ರತೆ ನೀಡಲಿಲ್ಲ ಎಂದು ನಾವು ಹೇಳಿದರೆ, ಬಿಜೆಪಿಯವರು ಆಧಾರರಹಿತ ಆರೋಪ ಎನ್ನುತ್ತಾರೆ. ಆದರೆ ಕಣಿವೆಯಲ್ಲಿ ಒಬ್ಬ ಬಿಜೆಪಿ ನಾಯಕನೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದಿಲ್ಲ ಏಕೆ ಎಂದು ಪ್ರಶ್ನಿಸಿದರು.

"ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಮತ್ತು ಆರ್‌ಎಸ್‌ಎಸ್ ಇಲ್ಲಿನ ಹಿಂಸಾಚಾರವನ್ನು ನೋಡಿಲ್ಲ. ನಾವು ಕಳೆದ ನಾಲ್ಕು ದಿನಗಳಿಂದ ಇಲ್ಲಿ ನಡೆದಿದ್ದೇವೆ. ಯಾವುದೇ ಬಿಜೆಪಿ ನಾಯಕ ಇಲ್ಲಿ ಈ ರೀತಿ ನಡೆಯಲು ಸಾಧ್ಯವಿಲ್ಲ ಎಂದು ನಾನು ನಿಮಗೆ ಖಾತರಿ ನೀಡುತ್ತೇನೆ. ಏಕೆಂದರೆ ಭಯ ಇದೆ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.

SCROLL FOR NEXT