ದೇಶ

ಒಡಿಶಾ ಆರೋಗ್ಯ ಸಚಿವರನ್ನು ಗುಂಡಿಕ್ಕಿ ಕೊಂದ ಪೊಲೀಸ್ ಅಧಿಕಾರಿ ಸೇವೆಯಿಂದ ವಜಾ

Lingaraj Badiger

ಭುವನೇಶ್ವರ: ಒಡಿಶಾ ಆರೋಗ್ಯ ಸಚಿವ ನಬಾ ದಾಸ್ ಅವರನ್ನು ಭಾನುವಾರ ಗುಂಡಿಕ್ಕಿ ಕೊಂದ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಗೋಪಾಲ್ ಕೃಷ್ಣ ದಾಸ್ ಅವರನ್ನು ಸೋಮವಾರ ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಜೈನ್ ತಿಳಿಸಿದ್ದಾರೆ.

ಆರೋಪಿ ಇದೀಗ ಪೊಲೀಸ್ ಕಸ್ಟಡಿಯಲ್ಲಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆಗಾಗಿ ಪೊಲೀಸ್ ವಶಕ್ಕೆ ಪಡೆಯಲಾಗುವುದು ಎಂದು ಅಪರಾಧ ವಿಭಾಗದ ಅಧಿಕಾರಿಗಳು ಹೇಳಿದ್ದಾರೆ.

ಪ್ರಕರಣದ ತನಿಖೆ ಮುಂದುವರೆದಿದ್ದು, ರಾಜ್ಯ ಅಪರಾಧ ವಿಭಾಗದ ತಂಡ ಆರೋಪಿ ಬಳಿ ಇದ್ದ 9 ಎಂಎಂ ಪಿಸ್ತೂಲ್ ಮತ್ತು 3 ಸುತ್ತಿನ ಜೀವಂತ ಗುಂಡುಗಳು, ಅವರ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದೆ.

ನಿನ್ನೆ ಝಾರಸುಗುಡ ಜಿಲ್ಲೆಯ ಬ್ರಜರಾಜನಗರದ ಗಾಂಧಿ ಚೌನ್ ನಲ್ಲಿ ಗೋಪಾಲ್ ಕೃಷ್ಣ ದಾಸ್ ಸಚಿವರ ಮೇಲೆ ಗುಂಡು ಹಾರಿಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಸಚಿವ ನಬಾ ದಾಸ್ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಬಂಧಿತ ಪೊಲೀಸ್ ಅಧಿಕಾರಿ ಸಚಿವರ ಮೇಲೆ ಗುಂಡು ಹಾರಿಸಿದ್ದು ಏಕೆ ಎಂಬುದು ಇನ್ನೂ ತಿಳಿದು ಬಂದಿಲ್ಲ. ಆದರೆ ಗೋಪಾಲ್ ಕೃಷ್ಣ ದಾಸ್ ಅವರ ಪತ್ನಿ, ತಮ್ಮ ಪತಿಯ ಮಾನಸಿಕ ಆರೋಗ್ಯ ಸರಿ ಇರಲಿಲ್ಲ ಎಂದು ಹೇಳಿದ್ದಾರೆ. 

SCROLL FOR NEXT