ದೇಶ

ಮಾಜಿ ಕಾನೂನು ಸಚಿವ ಶಾಂತಿ ಭೂಷಣ್ ನಿಧನ

Srinivas Rao BV

ನವದೆಹಲಿ: ಮಾಜಿ ಕಾನೂನು ಸಚಿವ ಶಾಂತಿ ಭೂಷಣ್ (97) ಮಂಗಳವಾರದಂದು ನಿಧನರಾದರು. ದೆಹಲಿಯ ನಿವಾಸದಲ್ಲಿ ಶಾಂತಿ ಭೂಷಣ್ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬ ಸದಸ್ಯರು ತಿಳಿಸಿದರು. 

ಶಾಂತಿ ಭೂಷಣ್ 1977 ರಿಂದ 1979 ರ ವರೆಗೆ ಮೊರಾರ್ಜಿ ದೇಸಾಯಿ ಸಂಪುಟದಲ್ಲಿ ಕಾನೂನು ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 

ಶಾಂತಿ ಭೂಷಣ್ ಅವರ ಪುತ್ರರಾದ ಜಯಂತ್ ಭೂಷಣ್ ಹಾಗೂ ಪ್ರಶಾಂತ್ ಭೂಷಣ್ ಅವರು ಮುಂಚೂಣಿಯಲ್ಲಿರುವ ವಕೀಲರಾಗಿದ್ದು, ಕಾನೂನು ವೃತ್ತಿಯಲ್ಲಿ ತೊಡಗಿದ್ದಾರೆ. ಇತ್ತೀಚೆಗೆ ಅವರು ರಾಫೆಲ್ ಜೆಟ್ ಒಪ್ಪಂದದ ಕುರಿತು ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಸುಪ್ರೀಂ ಕೋರ್ಟ್ ನಲ್ಲಿ ಪಿಐಎಲ್ ದಾಖಲಿಸಿ ವಾದ ಮಂಡಿಸಿದ್ದರು.

ಶಾಂತಿ ಭೂಷಣ್ ಅವರು ಹಲವಾರು ಸಾರ್ವಜನಿಕ ಮಹತ್ವವುಳ್ಳ ಪ್ರಕರಣಗಳಲ್ಲಿ ವಾದಿಸಿದ್ದರು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಚುನಾವಣಾ ಅಕ್ರಮವೆಸಗಿದ್ದ ಪ್ರಕರಣದಲ್ಲಿ ಅರ್ಜಿದಾರರಾಗಿದ್ದ ರಾಜ್ ನಾರಾಯಣ್ ಅವರ ಪರವಾಗಿಯೂ ಶಾಂತಿ ಭೂಷಣ್ ವಾದ ಮಂಡಿಸಿದ್ದರು.

ಭ್ರಷ್ಟಾಚಾರದ ವಿರುದ್ಧದ ಚಳುವಳಿಗಳಲ್ಲಿ ಭಾಗವಹಿಸಿದ್ದ ಶಾಂತಿ ಭೂಷಣ್, ಆಮ್ ಆದ್ಮಿ ಪಕ್ಷದೊಂದಿಗೆ ಒಂದಷ್ಟು ಕಾಲ ನಂಟು ಹೊಂದಿದ್ದರು. ಕಾನೂನು ಸಚಿವ ಕಿರಣ್ ರಿಜಿಜು ಶಾಂತಿ ಭೂಷಣ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

SCROLL FOR NEXT