ದೇಶ

NCP ಅಧ್ಯಕ್ಷ ಸ್ಥಾನದಿಂದ ಶರದ್ ಪವಾರ್ ಕಿತ್ತೊಗೆದ ಅಜಿತ್ ಪವಾರ್ ಬಣ!

Srinivasamurthy VN

ಮುಂಬೈ: ಮಹತ್ವದ ಬೆಳವಣಿಗೆಯಲ್ಲಿ ನ್ಯಾಶನಲಿಸ್ಟ್ ಕಾಂಗ್ರೆಸ್ (ಎನ್ ಸಿಪಿ) ಪಕ್ಷದ ಅಧ್ಯಕ್ಷ ಸ್ಥಾನದಿಂದ ಶರದ್ ಪವಾರ್ ರನ್ನು ಬಂಡಾಯ ಬಣದ ಮುಖ್ಯಸ್ಥ ಅಜಿತ್ ಪವಾರ್ ತೆಗೆದು ಹಾಕಿದ್ದಾರೆ.

ಹೌದು.. ಅಜಿತ್ ಪವಾರ್ ನೇತೃತ್ವದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಬಂಡಾಯ ಬಣ ಬುಧವಾರ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಅವರೇ ಸ್ಥಾಪಿಸಿದ ಮತ್ತು ಎರಡು ದಶಕಗಳಿಂದ ಮುನ್ನಡೆಸಿದ್ದ ಪಕ್ಷದ ಉನ್ನತ ಹುದ್ದೆಯಿಂದ ತೆಗೆದುಹಾಕಿದೆ.

ಮೂಲಗಳ ಪ್ರಕಾರ ಅಜಿತ್ ಪವಾರ್ ಬಣ ಬಂಡಾಯ ಸಾರುವ 2 ದಿನಗಳ ಮುನ್ನವೇ ಎನ್ ಸಿಪಿ ಅಧ್ಯಕ್ಷ ಸ್ಥಾನದಿಂದ ಶರದ್ ಪವಾರ್ ರನ್ನು ತೆಗೆದು ಹಾಕಲಾಗಿದೆ ಎಂದು ಹೇಳಿದೆ. ಅಲ್ಲದೆ ಅಜಿತ್ ಪವಾರ್ ಅವರನ್ನು ಪಕ್ಷದ ಸುಮಾರು 40 ಶಾಸಕರು, ಎಮ್‌ಎಲ್‌ಸಿಗಳು ಮತ್ತು ಸಂಸದರು ಪಕ್ಷದ ಮುಖ್ಯಸ್ಥರಾಗಿ ಆಯ್ಕೆ ಮಾಡಿದ್ದು ಈ ಬಗ್ಗೆ ಚುನಾವಣಾ ಆಯೋಗಕ್ಕೆ ಕೂಡ ಮಾಹಿತಿ ನೀಡಲಾಗಿದೆ ಎಂದು ಹೇಳಿಕೊಂಡಿದೆ.

ಈ ಹಿಂದೆ, ತಮ್ಮ ಸೋದರಳಿಯ ಅಜಿತ್ ಪವಾರ್ ಅವರು ಕರೆದಿದ್ದ ಪಕ್ಷದ ಸಮಾನಾಂತರ ಸಭೆಯಲ್ಲಿ ವೇದಿಕೆಯಲ್ಲಿ ತಮ್ಮ ಫೋಟೋ ಹಾಕಿಕೊಂಡಿದ್ದಕ್ಕೆ ಶರದ್ ಪವಾರ್ ಆಕ್ಷೇಪಿಸಿದ್ದರು ಮತ್ತು ಅವರ ಚಿತ್ರವನ್ನು ಬಳಸದಂತೆ ಬಂಡಾಯ ಬಣಕ್ಕೆ ಸೂಚಿಸಿದ್ದರು.  

ದಕ್ಷಿಣ ಮುಂಬೈನ ಚವ್ಹಾಣ್ ಸೆಂಟರ್‌ನಲ್ಲಿ ಸುಮಾರು 53 ಎನ್‌ಸಿಪಿ ಶಾಸಕರು ಹಾಜರಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದ 83 ವರ್ಷದ ಪವಾರ್, ಪ್ರಧಾನಿ ನರೇಂದ್ರ ಮೋದಿ ಎನ್‌ಸಿಪಿಯನ್ನು ಭ್ರಷ್ಟ ಪಕ್ಷ ಎಂದು ಕರೆದರೂ ಅಧಿಕಾರಕ್ಕಾಗಿ ಬಿಜೆಪಿಯೊಂದಿಗೆ ಹೋಗುತ್ತಿದ್ದಾರೆ ಎಂದು ತಮ್ಮ ಸೋದರಳಿಯ ಅಜಿಕ್ ಪವಾರ್ ರನ್ನು ಟೀಕಿಸಿದ್ದರು.

ಇದಕ್ಕೆ ತಿರುಗೇಟು ನೀಡಿದ್ದ ಅಜಿತ್ ಪವಾರ್, ಚಿಕ್ಕಪ್ಪ ಶರದ್ ಪವಾರ್ ಅವರು ಪಕ್ಷದಲ್ಲಿ ತಮ್ಮ ಮಗಳಾದ ಸುಪ್ರಿಯಾ ಸುಳೆ ಅವರಿಗೆ ಸ್ಥಾನ ಕಲ್ಪಿಸಲು ಪಕ್ಷಪಾತ ಮಾಡಿ ನನ್ನನ್ನು ಮೂಲೆಗುಂಪು ಮಾಡಲು ಯತ್ನಿಸಿದ್ದರು. ನಿಮ್ಮ ಆಶೀರ್ವಾದ ನನಗೇಕೆ ಸಿಗಲಿಲ್ಲ... ನನಗೆ ಮಹಾರಾಷ್ಟ್ರವನ್ನು ಮುನ್ನಡೆಸುವ ಸಾಮರ್ಥ್ಯ ಇಲ್ಲವೇ... ನಾವು ಸುಳೆ ಅವರನ್ನು ಪಕ್ಷದ ಕಾರ್ಯಾಧ್ಯಕ್ಷರನ್ನಾಗಿ ಸ್ವೀಕರಿಸಿದ್ದೇವೆ.. ಆದರೂ ನಮ್ಮ ಮೇಲೆ ನಿಮಗೆ ನಂಬಿಕೆ ಇಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

SCROLL FOR NEXT