ದೇಶ

ತಬ್ರೇಜ್ ಅನ್ಸಾರಿ ಹತ್ಯೆ ಪ್ರಕರಣ: ಎಲ್ಲಾ 10 ಅಪರಾಧಿಗಳಿಗೆ ಹತ್ತು ವರ್ಷ ಜೈಲು ಶಿಕ್ಷೆ

Lingaraj Badiger

ರಾಂಚಿ: ತಬ್ರೇಜ್ ಅನ್ಸಾರಿಯನ್ನು ಥಳಿಸಿ ಕೊಂದ ಪ್ರಕರಣದ ಎಲ್ಲಾ 10 ಅಪರಾಧಿಗಳಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಜಾರ್ಖಂಡ್ ನ ಸೆರೈಕೇಲಾ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ.

ಇದಕ್ಕೂ ಮುನ್ನ ಜೂನ್ 27ರಂದು ಒಟ್ಟು 13 ಆರೋಪಿಗಳ ಪೈಕಿ 10 ಮಂದಿ ದೋಷಿಗಳೆಂದು ಹೆಚ್ಚುವರಿ ಸೆಷನ್ ನ್ಯಾಯಾಧೀಶ ಅಮಿತ್ ಶೇಖರ್ ಅವರು ತೀರ್ಪು ನೀಡಿದ್ದರು. ಆದರೆ ಶಿಕ್ಷೆಯ ಪ್ರಮಾಣವನ್ನು ಇಂದಿಗೆ ಕಾಯ್ದಿರಿಸಿದ್ದರು.

ತಬ್ರೇಜ್ ಅನ್ಸಾರಿ ಅವರ ಪತ್ನಿಯನ್ನು ಪ್ರತಿನಿಧಿಸುವ ವಕೀಲರ ಪ್ರಕಾರ, ನ್ಯಾಯಾಲಯವು ಪ್ರತಿಯೊಬ್ಬ ಅಪರಾಧಿಗಳಿಗೆ 23,100 ರೂಪಾಯಿ ದಂಡವನ್ನು ವಿಧಿಸಿದೆ, ದಂಡ ಪಾವತಿಸಲು ವಿಫಲವಾದರೆ 6 ತಿಂಗಳ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಕೋರ್ಟ್ ಹೇಳಿದೆ.

ತಬ್ರೇಜ್ ಅನ್ಸಾರಿ ಅವರ ಪತ್ನಿ ಶಾಹಿಸ್ತಾ ಪರ್ವೀನ್ ಪರ ವಾದ ಮಂಡಿಸಿದ ವಕೀಲ ಅಲ್ತಾಫ್ ಹುಸೇನ್ ಅವರು, ಈ ಶಿಕ್ಷೆಯಿಂದ ತಾವು ತೃಪ್ತರಾಗಿಲ್ಲ. ಈ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸುವಂತೆ ಕೋರಿ ಹೈಕೋರ್ಟ್‌ಗೆ ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.

24 ವರ್ಷದ ಅನ್ಸಾರಿ ಅವರನ್ನು 2019ರ ಜೂನ್ 18 ರಂದು ಸೆರೈಕೇಲ ಪೊಲೀಸ್ ಠಾಣಾ ವ್ಯಾಪ್ತಿಯ ಧತ್ ಕಿಡಿಹ್ ಎಂಬಲ್ಲಿ ಮೋಟಾರ್ ಸೈಕಲ್ ಕದ್ದ ಆರೋಪದ ಮೇಲೆ ಕಂಬಕ್ಕೆ ಕಟ್ಟಿಹಾಕಿ 'ಜೈ ಶ್ರೀ ರಾಮ್' ಮತ್ತು 'ಜೈ ಬಜರಂಗ್ ಬಲಿ' ಎಂದು ಘೋಷಣೆ ಕೂಗುತ್ತ ರಾಡ್ ಗಳಿಂದ ಥಳಿಸಿ ಹತ್ಯೆ ಮಾಡಲಾಗಿತ್ತು.

SCROLL FOR NEXT