ದೇಶ

'82 ವರ್ಷದ ಸಿಂಹ ಇನ್ನೂ ಜೀವಂತವಾಗಿದೆ': ಅಜಿತ್ ಪವಾರ್ ಗೆ ಎನ್ ಸಿಪಿ ನಾಯಕರ ತಿರುಗೇಟು

Sumana Upadhyaya

ಮುಂಬೈ: ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್(Ajit Pawar) ತಮ್ಮ ಚಿಕ್ಕಪ್ಪನ ವಿರುದ್ಧ ಆರೋಪ ಮಾಡಿದ ಬೆನ್ನಲ್ಲೇ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ(NCP) ಶಾಸಕ ಜಿತೇಂದ್ರ ಅವ್ಹಾದ್ ತಿರುಗೇಟು ನೀಡಿದ್ದಾರೆ. ವಯಸ್ಸಾದ ಮಾತ್ರಕ್ಕೆ ಅವರು ರಾಜಕೀಯವಾಗಿ ಶಕ್ತಿಗುಂದಿದ್ದಾರೆ ಎಂದರ್ಥವಲ್ಲ, ಅವರು ರಾಜಕೀಯ ಜೀವನವನ್ನು ನಿಲ್ಲಿಸುವುದಿಲ್ಲ ಎಂದಿದ್ದಾರೆ.

ಐಎಎಸ್ ಅಧಿಕಾರಿಗಳು 60 ವರ್ಷಕ್ಕೆ ನಿವೃತ್ತರಾಗುತ್ತಾರೆ. ಬಿಜೆಪಿಯಲ್ಲಿ 75 ವರ್ಷಕ್ಕೆ ರಾಜಕೀಯ ನಿವೃತ್ತಿ ನೀಡುತ್ತಾರೆ, ಎಲ್ ಕೆ ಅಡ್ವಾಣಿ, ಮುರಳಿ ಮನೋಹರ ಜೋಷಿಯವರ ಉದಾಹರಣೆಗಳನ್ನು ನೀವು ನೋಡಬಹುದು. ಆದರೆ ಶರದ್ ಪವಾರ್(Sharad Pawar) ಅವರು ಯಾವತ್ತಿಗೂ ರಾಜಕೀಯ ನಿವೃತ್ತಿ ಪಡೆದು ಮನೆಯಲ್ಲಿ ಕೂರುವವರಲ್ಲ ಎಂದರು.

ನಿಮಗೆ 83 ವರ್ಷವಾಯ್ತು, ಇನ್ನು ರಾಜಕೀಯ ನಿಲ್ಲಿಸಿ ನಮಗೆ ಆಶೀರ್ವಾದ ಮಾಡಿ, ನಿಮಗೆ ದೀರ್ಘಾವಧಿಯ ಆಯುರಾರೋಗ್ಯ ನೀಡಲಿ ಎಂದು ನಾವು ಪ್ರಾರ್ಥಿಸುತ್ತೇವೆ ಎಂದು ಅಜಿತ್ ಪವಾರ್ ಹೇಳಿದ್ದರು.

ಅದಕ್ಕೆ ಶಾಸಕ ಜಿತೇಂದ್ರ ಅವ್ಹಾದ್ ತಿರುಗೇಟು ನೀಡಿ, ನೀವು ಅವರನ್ನು ಮನೆಯಲ್ಲಿ ಕೂರಬೇಕೆಂದು ಹೇಳುತ್ತಿದ್ದೀರಾ, ಅವರು ಖಂಡಿತಾ ಮನೆಯಲ್ಲಿ ಕೂರುವುದಿಲ್ಲ, ಅದನ್ನು ಮರೆತುಬಿಡಿ ಎಂದಿದ್ದಾರೆ.

ಮತ್ತೊಬ್ಬ ಎನ್ ಸಿಪಿ ನಾಯಕ ಶರದ್ ಪವಾರ್ ಅವರ ಅನುಯಾಯಿ ಅನಿಲ್ ದೇಶ್ ಮುಖ್ ಶರದ್ ಪವಾರ್ ಅವರನ್ನು ಸಿಂಹ ಎಂದು ಕರೆದಿದ್ದಾರೆ. 82 ವರ್ಷದ ಸಿಂಹ ಇನ್ನೂ ಜೀವಂತವಾಗಿದೆ ಎಂದು ಹೇಳಿದ್ದಾರೆ.

ತಮ್ಮ ತಂದೆಯ ವಿರುದ್ಧ ಯಾರು ಏನೇ ಮಾತನಾಡಿದರೂ ಸಹಿಸುವುದಿಲ್ಲ. ಬೇಕಾದರೆ ನನ್ನನ್ನು ಅಥವಾ ಬೇರೆಯವರನ್ನು ಟೀಕೆ ಮಾಡಲಿ, ಆದರೆ ನನ್ನ ತಂದೆಯ ವಿರುದ್ಧ ಮಾತನಾಡಿದರೆ ಕೇಳಿಕೊಂಡು ಸುಮ್ಮನೆ ಇರುವುದಿಲ್ಲ. ಅವರು ಪಕ್ಷದ ಕಾರ್ಯಕರ್ತರಿಗೆ ತಂದೆಗಿಂತ ಹೆಚ್ಚು ಎಂದಿದ್ದಾರೆ.

2019ರಲ್ಲಿ ದೇವೇಂದ್ರ ಫಡ್ನವಿಸ್ ಮತ್ತು ಅಜಿತ್ ಪವಾರ್ ಅವರು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ಕೆಲವೇ ದಿನಗಳ ನಂತರ ರಾಜೀನಾಮೆ ನೀಡಿದರು. ನಾಲ್ಕು-ಐದು ವರ್ಷಗಳ ಹಿಂದೆ ನಾನು ತುಂಬಾ ಭಾವುಕನಾಗಿದ್ದೆ, ಆದರೆ ಈಗ ನಾನು ಬಲಶಾಲಿಯಾಗಿದ್ದೇನೆ. ನನ್ನನ್ನು ಬಲಪಡಿಸಿದವರಿಗೆ ನಾನು ಧನ್ಯವಾದ ಹೇಳುತ್ತೇನೆ. ನಮ್ಮ ನಿಜವಾದ ಹೋರಾಟ ಬಿಜೆಪಿಯ ಕಾರ್ಯವೈಖರಿಯ ವಿರುದ್ಧವೇ ಹೊರತು ಯಾವುದೇ ವ್ಯಕ್ತಿಯ ವಿರುದ್ಧವಲ್ಲ ಎಂದು ಬಾರಾಮತಿ ಸಂಸದೆಯಾಗಿರುವ ಸುಪ್ರಿಯಾ ಸುಳೆ ಹೇಳಿದ್ದಾರೆ. 

SCROLL FOR NEXT