ದೇಶ

ಭಾರತದ ಹೊರಗಿನ ಮೊದಲ ಐಐಟಿ ತಾಂಜಾನಿಯಾದಲ್ಲಿ ನಿರ್ಮಾಣ: ವಿದೇಶಾಂಗ ಸಚಿವಾಲಯ

Manjula VN

ನವದೆಹಲಿ: ಭಾರತದ ಹೊರಗಿನ ಮೊದಲ ಐಐಟಿ ಕ್ಯಾಂಪಸ್ ತಾಂಜಾನಿಯಾದ ಜಂಜಿಬಾರ್‌ನಲ್ಲಿ ನಿರ್ಮಾಣವಾಗಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ.

ಪೂರ್ವ ಆಫ್ರಿಕಾದ ಕರಾವಳಿಯಲ್ಲಿರುವ ತಾಂಜೇನಿಯಾದ ದ್ವೀಪಸಮೂಹವಾಗಿರುವ ಜಾಂಜಿಬಾರ್‌ನಲ್ಲಿ ಐಐಟಿ ಮದ್ರಾಸ್‌ನ ಕ್ಯಾಂಪಸ್‌ನ ಸ್ಥಾಪನೆಗೆ ತಿಳುವಳಿಕೆ ಪತ್ರಕ್ಕೆ (ಎಂಒಯು) ಸಹಿ ಹಾಕಲಾಗಿದೆ.

ಬುಧವಾರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮತ್ತು ಜಂಜಿಬಾರ್ ಅಧ್ಯಕ್ಷ ಹುಸೇನ್ ಅಲಿ ಮ್ವಿನಿ ಅವರ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಜೈಂಶಕರ್ ಅವರು ಪ್ರಸ್ತುತ ತಾಂಜಾನಿಯಾ ಪ್ರವಾಸದಲ್ಲಿದ್ದಾರೆ.

“ಭಾರತದ ಹೊರಗೆ ಸ್ಥಾಪಿಸಲಾದ ಮೊದಲ ಐಐಟಿ ಕ್ಯಾಂಪಸ್ ಜಾಂಜಿಬಾರ್‌ನಲ್ಲಿರಲಿದೆ” ಎಂದು ಸಚಿವಾಲಯ ಹೇಳಿದೆ.

ಭಾರತದ ಶಿಕ್ಷಣ ಸಚಿವಾಲಯ, ಐಐಟಿ ಮದ್ರಾಸ್ ಮತ್ತು ಜಾಂಜಿಬಾರ್‌ನ ಶಿಕ್ಷಣ ಮತ್ತು ವೃತ್ತಿಪರ ತರಬೇತಿ ಸಚಿವಾಲಯದ ನಡುವೆ ತಿಳುವಳಿಕಾ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಅದು ಹೇಳಿದೆ.

ರಾಷ್ಟ್ರೀಯ ಶಿಕ್ಷಣ ನೀತಿ 2020 (NEP) ಉನ್ನತ ಕಾರ್ಯಕ್ಷಮತೆ ಹೊಂದಿರುವ ಭಾರತೀಯ ವಿಶ್ವವಿದ್ಯಾಲಯಗಳ ಕ್ಯಾಂಪಸ್‌ಗಳನ್ನು ಇತರ ದೇಶಗಳಲ್ಲಿ ಸ್ಥಾಪಿಸಲು ಪ್ರೋತ್ಸಾಹಿಸುತ್ತಿದೆ ಎಂದು ಅಭಿಪ್ರಾಯಪಟ್ಟಿದೆ.

“ಈ ಕ್ಯಾಂಪಸ್ ಭಾರತ ಮತ್ತು ತಾಂಜಾನಿಯಾ ನಡುವಿನ ದೀರ್ಘಕಾಲದ ಸ್ನೇಹವನ್ನು ಪ್ರತಿಬಿಂಬಿಸುತ್ತದೆ. ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಶೈಕ್ಷಣಿಕ ಪಾಲುದಾರಿಕೆಯ ಸಂಬಂಧವನ್ನು ಔಪಚಾರಿಕಗೊಳಿಸಲಾಗಿದೆ.  ಐಐಟಿ 2023ರ ಅಕ್ಟೋಬರ್ ತಿಂಗಳಿನಲ್ಲಿ ಆರಂಭಗೊಳ್ಳಲಿದೆ ಎಂದು ಹೇಳಿದೆ.

SCROLL FOR NEXT