ದೇಶ

ಪ್ರತಿಕೂಲ ಹವಾಮಾನ: ಅಮರನಾಥ ಯಾತ್ರೆ ಸ್ಥಗಿತ

Sumana Upadhyaya

ಅಮರನಾಥ: ಜಮ್ಮು-ಕಾಶ್ಮೀರದ ಹಲವು ಭಾಗಗಳಲ್ಲಿ ಮಳೆ ಸುರಿದ ಕಾರಣ ಪ್ರತಿಕೂಲ ಹವಾಮಾನದಿಂದಾಗಿ ಅಮರನಾಥ ಯಾತ್ರೆಯನ್ನು ಶುಕ್ರವಾರ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾಲ್ಟಾಲ್ ಮತ್ತು ಪಹಲ್ಗಾಮ್ ಮಾರ್ಗಗಳಲ್ಲಿ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಇಂದು ಬೆಳಗ್ಗೆ ಪವಿತ್ರ ಗುಹಾ ದೇಗುಲದ ಕಡೆಗೆ ಯಾವುದೇ ಯಾತ್ರಿಕರಿಗೆ ತೆರಳಲು ಅವಕಾಶ ನೀಡುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಂಬನ್ ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮೋಹಿತಾ ಶರ್ಮಾ, ಜಿಲ್ಲೆಯ ಚಂದರಕೋಟೆ ಪ್ರದೇಶದಲ್ಲಿ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ಪಹಲ್ಗಾಮ್ ಬೆಲ್ಟ್ ನಲ್ಲಿ ಪ್ರತಿಕೂಲ ಹವಾಮಾನದಿಂದಾಗಿ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಶರ್ಮಾ ಪಿಟಿಐಗೆ ತಿಳಿಸಿದರು.

ಇಂದು ಮುಂಜಾನೆ ಆರಂಭವಾದ ಭಾರೀ ಮಳೆಯಿಂದಾಗಿ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಾಲ್ಟಾಲ್ ಮತ್ತು ನುನ್ವಾನ್ ಬೇಸ್ ಕ್ಯಾಂಪ್‌ಗಳಲ್ಲಿ ಯಾತ್ರಾರ್ಥಿಗಳನ್ನು ನಿಲ್ಲಿಸಲಾಗಿದೆ.

ಜಮ್ಮುವಿನ ಅಧಿಕಾರಿಗಳ ಪ್ರಕಾರ, ಪಹಲ್ಗಾಮ್ ಬೇಸ್ ಕ್ಯಾಂಪ್‌ಗೆ ತೆರಳುತ್ತಿದ್ದ 4,600 ಯಾತ್ರಾರ್ಥಿಗಳ ತಂಡವನ್ನು ಚಂದರ್‌ಕೋಟ್‌ನಲ್ಲಿ ನಿಲ್ಲಿಸಲಾಗಿದ್ದು, ಬಲ್ಟಾಲ್ ಶಿಬಿರಕ್ಕೆ ಪ್ರಯಾಣಿಸುವ 2,410 ಭಕ್ತರ ಮತ್ತೊಂದು ಗುಂಪನ್ನು ಮುಂದುವರಿಸಲು ಅನುಮತಿಸಲಾಗಿದೆ.

ಹವಾಮಾನ ಸುಧಾರಿಸಿದ ನಂತರ ಯಾತ್ರೆ ಪುನರಾರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 17,000 ಕ್ಕೂ ಹೆಚ್ಚು ಯಾತ್ರಿಗಳು ನಿನ್ನೆ ಅಮರನಾಥ ಪವಿತ್ರ ಗುಹೆಯಲ್ಲಿ ತಮ್ಮ ನಮನ ಸಲ್ಲಿಸಿದ್ದಾರೆ. ಅಮರನಾಥದಲ್ಲಿ ಸ್ವಾಭಾವಿಕವಾಗಿ ರೂಪುಗೊಂಡ ಶಿವನ ಶಿವಲಿಂಗದ ದರ್ಶನವನ್ನು ಮಾಡಿದ ಒಟ್ಟು ಯಾತ್ರಾರ್ಥಿಗಳು ನಿನ್ನೆ ಸಂಜೆಯವರೆಗೆ ಸುಮಾರು 85,000 ಕ್ಕೆ ತಲುಪಿದ್ದಾರೆ.

SCROLL FOR NEXT