ದೇಶ

ಸ್ನೇಹಿತನೊಂದಿಗೆ ವಾಗ್ವಾದದ ವೇಳೆ ಶಿವಾಜಿ ಮಹಾರಾಜರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ; ವ್ಯಕ್ತಿಯ ಬಂಧನ

Ramyashree GN

ವಡೋದರಾ: ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಗುಜರಾತ್‌ನ ವಡೋದರಾ ನಗರದಲ್ಲಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

ಆರ್ಯನ್ ಪಟೇಲ್ ಎಂದು ಗುರುತಿಸಲಾದ ಆರೋಪಿಯು ಸ್ನೇಹಿತನೊಂದಿಗೆ ವಾಗ್ವಾದ ನಡೆಸಿದ್ದನು. ಈ ಸಂದರ್ಭದಲ್ಲಿ ಆತ 17ನೇ ಶತಮಾನದ ಮರಾಠ ರಾಜನ ಬಗ್ಗೆ ಕೆಲವು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾನೆ ಎಂದು ವಡೋದರಾ ತಾಲೂಕು ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

ಈ ಹೇಳಿಕೆಗಳನ್ನು ವ್ಯಕ್ತಿಯೊಬ್ಬರು ಮೊಬೈಲ್ ಫೋನ್ ವಿಡಿಯೋದಲ್ಲಿ ಸೆರೆಹಿಡಿದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಶುಕ್ರವಾರ ರಾತ್ರಿ ಎಫ್‌ಐಆರ್ ದಾಖಲಾಗಿದ್ದು, ಶನಿವಾರ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಎಯು ಗೋಹಿಲ್ ತಿಳಿಸಿದ್ದಾರೆ.

ದೂರುದಾರ ದೀಪಕ್ ಪಾಲ್ಕರ್, ಆರೋಪಿ ಛತ್ರಪತಿ ಶಿವಾಜಿ ಮಹಾರಾಜರ ವಿರುದ್ಧ ಸಾರ್ವಜನಿಕವಾಗಿ ಅಸಭ್ಯ ಭಾಷೆ ಬಳಸಿದ್ದಾರೆ. ಆ ಮೂಲಕ ಹಿಂದೂ ಸಮುದಾಯದ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಆರೋಪಿಸಿದ್ದಾರೆ.

ಆರೋಪಿಯು ಸಾರ್ವಜನಿಕವಾಗಿ ಶಿವಾಜಿ ಮಹಾರಾಜರ ವಿರುದ್ಧ ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಮಾಡುತ್ತಿರುವುದು ಕೇಳಿಬಂದಿರುವ ವಿಡಿಯೋ ವಾಟ್ಸಾಪ್‌ನಲ್ಲಿ ತನಗೆ ಬಂದಿತು ಎಂದು ಹೇಳಿದ್ದಾರೆ.

ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 153 (ಎ) (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು 294 (ಬಿ) (ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ಪದಗಳನ್ನು ಹೇಳುವುದು) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

SCROLL FOR NEXT