ನವದೆಹಲಿ: ಗೋಪ್ಯ ಮಾಹಿತಿಯನ್ನು ಮಹಿಳೆಯೊಬ್ಬರಿಗೆ ರವಾನಿಸಿದ ಆರೋಪದ ಮೇಲೆ ಕೇಂದ್ರ ಹಣಕಾಸು ಸಚಿವಾಲಯದ ಗುತ್ತಿಗೆ ಉದ್ಯೋಗಿಯೊಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಖಚಿತ ಮಾಹಿತಿ ಆಧಾರದ ಮೇರೆಗೆ ಭೀಮ್ ನಗರದ ನಿವಾಸಿ ನವೀನ್ ಪಾಲ್ ಎಂಬಾತನನ್ನು ಸೋಮವಾರ ಸಂಜೆ ಬಂಧಿಸಲಾಯಿತು ಎಂದು ಪೊಲೀಸ್ ಉಪ ಆಯುಕ್ತ (ಗ್ರಾಮೀಣ) ಶುಭಂ ಪಟೇಲ್ ತಿಳಿಸಿದ್ದಾರೆ.
ಆರೋಪಿಯಿಂದ 61 ಪುಟಗಳ ಅಧಿಕೃತ ದಾಖಲೆ ಮತ್ತು ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. ತನಿಖೆ ಸಮಯದಲ್ಲಿ ಆರೋಪಿ ನವೀನ್ ಪಾಲ್ ತನ್ನ ಮೊಬೈಲ್ ನಲ್ಲಿ 'ಕೊಲ್ಕತ್ತಾದ ಅಂಜಲಿ' ಎಂದು ಸೇವ್ ಮಾಡಿದ್ದ ಮೊಬೈಲ್ ಸಂಖ್ಯೆಗೆ ಗೋಪ್ಯ ಮಾಹಿತಿಗಳನ್ನು ವಾಟ್ಸಾಪ್ ಮೂಲಕ ರವಾನಿಸುತ್ತಿರುವ ಶಂಕೆ ಕಂಡುಬಂದಿದೆ ಎಂದು ಡಿಸಿಪಿ ತಿಳಿಸಿದ್ದಾರೆ. ಹಣಕ್ಕಾಗಿ ಪಾಲ್ ಈ ಕೆಲಸ ಮಾಡಿದ್ದು, ಕೆಲವು ಬ್ಯಾಂಕ್ ವಹಿವಾಟುಗಳನ್ನು ಪರಿಶೀಲಿಸಲಾಗಿದೆ ಎಂದು ಅವರು ಹೇಳಿದರು.
ಆರೋಪಿಗಳ ವಿರುದ್ಧ ಅಧಿಕೃತ ರಹಸ್ಯ ಕಾಯ್ದೆ ಮತ್ತು ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಪಾಲ್ ಮಹಿಳೆಗೆ ಸೂಕ್ಷ್ಮ ಮಾಹಿತಿ ಸೋರಿಕೆ ಮಾಡುವುದು ರಾಷ್ಟ್ರೀಯ ಭದ್ರತೆಗೆ ಅಪಾಯವನ್ನುಂಟುಮಾಡುತ್ತದೆ ಮತ್ತು ಇತರ ದೇಶಗಳೊಂದಿಗೆ ಭಾರತದ ಸಂಬಂಧವನ್ನು ಹಾನಿಗೊಳಿಸುತ್ತದೆ ಎಂದು ಅವರು ಹೇಳಿದರು.