ಜೈಪುರ: ರಾಜಸ್ಥಾನದ ಭರತ್ಪುರದಲ್ಲಿ ಕೊಲೆ ಆರೋಪಿಯನ್ನು ಪೊಲೀಸರು ವಿಚಾರಣೆಗಾಗಿ ನ್ಯಾಯಾಲಯಕ್ಕೆ ಕರೆದೊಯ್ಯುತ್ತಿದ್ದ ರಾಜಸ್ಥಾನ ರೋಡ್ವೇಸ್ ಬಸ್ಸಿನೊಳಗೆ ನುಗ್ಗಿದ ಸುಮಾರು ಹನ್ನೆರಡು ಜನರು ಗುಂಪು, ಆರೋಪಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುಂಡಿನ ದಾಳಿಯಲ್ಲಿ ಮತ್ತೊಬ್ಬ ಕೊಲೆ ಆರೋಪಿ ಸಹ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಆತನ ಪರಿಸ್ಥಿತಿ ಗಂಭೀರವಾಗಿದೆ ಎಂದು ಅವರು ಹೇಳಿದ್ದಾರೆ.
ಪೊಲೀಸರ ಪ್ರಕಾರ, ಭರತ್ಪುರದ ಹಲೇನಾ ಪೊಲೀಸ್ ಠಾಣೆ ವ್ಯಾಪ್ತಿಯ ಅಮೋಲಿ ಟೋಲ್ ಪ್ಲಾಜಾ ಬಳಿ ಕಾರು ಮತ್ತು ಎರಡು ಮೋಟಾರ್ ಬೈಕ್ ಗಳಲ್ಲಿ ಬಂದ ಸುಮಾರು 12 ಜನ, ಬಸ್ ಅನ್ನು ಅಡಗಟ್ಟಿ,
ಬಸ್ಸಿನೊಳಗೆ ನುಗ್ಗಿ ಪೊಲೀಸರ ಮೇಲೆ ಖಾರದ ಪುಡಿ ಎರಚಿ, ಕೊಲೆ ಆರೋಪಿಗಳಾದ ಕುಲದೀಪ್ ಜಘೀನಾ ಮತ್ತು ವಿಜಯಪಾಲ್ ಮೇಲೆ ಗುಂಡು ಹಾರಿಸಿದ್ದಾರೆ.
ಎಸ್ಎಲ್ಆರ್ ರೈಫಲ್ಗಳೊಂದಿಗೆ ಶಸ್ತ್ರಸಜ್ಜಿತ ಹೆಡ್ ಕಾನ್ಸ್ಟೆಬಲ್ ನೇತೃತ್ವದ ಏಳು ಪೊಲೀಸರ ತಂಡ 2022ರ ಕೊಲೆ ಪ್ರಕರಣದ ಆರೋಪಿಗಳಾದ ಜಘೀನಾ ಮತ್ತು ವಿಜಯಪಾಲ್ ಅವರನ್ನು ಜೈಪುರದಿಂದ ಭರತ್ಪುರಕ್ಕೆ ಕರೆದೊಯ್ಯುತ್ತಿತ್ತು.
ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಇಬ್ಬರು ಕೊಲೆ ಆರೋಪಿಗಳನ್ನು ಭರತ್ಪುರದ ಆರ್ಬಿಎಂ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ವೈದ್ಯರು ಜಘೀನಾ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ. ಆದರೆ ವಿಜಯಪಾಲ್ ಸ್ಥಿತಿ ಗಂಭೀರವಾಗಿದೆ ಎಂದು ಭರತ್ಪುರ ಎಸ್ಪಿ ಮೃದುಲ್ ಕಚ್ಚವಾ ಅವರು ಹೇಳಿದ್ದಾರೆ.
ಏತನ್ಮಧ್ಯೆ, ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಆರೋಪಿಗಳನ್ನು ಗುರುತಿಸಲಾಗಿದ್ದು, ಅವರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಸ್ಸಿನಲ್ಲಿ ಇತರೆ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಪೊಲೀಸರು ಪ್ರತಿಯಾಗಿ ಗುಂಡು ಹಾರಿಸಿಲ್ಲ.
ಯಾವುದೇ ಪೋಲೀಸರು ನಿರ್ಲಕ್ಷ್ಯ ತೋರಿದ್ದು, ಕಂಡುಬಂದರೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಜೈಪುರ್ ಹೆಚ್ಚುವರಿ ಪೊಲೀಸ್ ಆಯುಕ್ತ(ಆಡಳಿತ) ರಾಹುಲ್ ಪ್ರಕಾಶ್ ಅವರು ಹೇಳಿದ್ದಾರೆ.