ದೇಶ

ಕಲ್ಲಿದ್ದಲು ಹಗರಣ: ಮಾಜಿ ಸಂಸದ ವಿಜಯ್ ದರ್ದಾ, ಮಾಜಿ ಕಾರ್ಯದರ್ಶಿ ಎಚ್‌ಸಿ ಗುಪ್ತಾ ದೋಷಿ

Lingaraj Badiger

ನವದೆಹಲಿ: ಛತ್ತೀಸ್‌ಗಢದಲ್ಲಿ ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಅಕ್ರಮಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ರಾಜ್ಯಸಭಾ ಮಾಜಿ ಸಂಸದ ವಿಜಯ್ ದರ್ದಾ ಮತ್ತು ಮಾಜಿ ಕಲ್ಲಿದ್ದಲು ಕಾರ್ಯದರ್ಶಿ ಎಚ್‌ಸಿ ಗುಪ್ತಾ ಸೇರಿದಂತೆ ಏಳು ಆರೋಪಿಗಳು ತಪ್ಪಿತಸ್ಥರು ಎಂದು ದೆಹಲಿ ನ್ಯಾಯಾಲಯ ಗುರುವಾರ ತೀರ್ಪು ನೀಡಿದೆ.

ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ಸಂಜಯ್ ಬನ್ಸಾಲ್ ಅವರು, ಆರೋಪಿಗಳಾದ ದರ್ದಾ ಹಾಗೂ ಪುತ್ರ ದೇವೆಂದರ್ ದರ್ದಾ, ಇಬ್ಬರು ಹಿರಿಯ ಅಧಿಕಾರಿಗಳಾದ ಕೆ ಎಸ್ ಕ್ರೋಫಾ ಮತ್ತು ಕೆ ಸಿ ಸಮ್ರಿಯಾ, ಜೆಎಲ್‌ಡಿ ಯವತ್ಮಲ್ ಎನರ್ಜಿ ಪ್ರೈವೇಟ್ ಲಿಮಿಟೆಡ್ ಮತ್ತು ಅದರ ನಿರ್ದೇಶಕ ಮನೋಜ್ ಕುಮಾರ್ ಜಯಸ್ವಾಲ್ ಅವರನ್ನೂ ದೋಷಿಗಳೆಂದು ತೀರ್ಪು ನೀಡಿದ್ದಾರೆ.

ನ್ಯಾಯಾಧೀಶ ಸಂಜಯ್ ಬನ್ಸಾಲ್ ಅವರು ಶಿಕ್ಷೆಯ ಪ್ರಮಾಣವನ್ನು ಜುಲೈ 18ಕ್ಕೆ ಕಾಯ್ದಿರಿಸಿದ್ದಾರೆ.

ಸಿಬಿಐ ತನ್ನ ಪ್ರಕರಣವನ್ನು ಎಲ್ಲಾ ಅನುಮಾನಗಳನ್ನು ಮೀರಿ ಆರೋಪ ಸಾಬೀತುಪಡಿಸಲು ಸಮರ್ಥವಾಗಿದೆ ಎಂದು ಹಿರಿಯ ಪಬ್ಲಿಕ್ ಪ್ರಾಸಿಕ್ಯೂಟರ್ ಎ ಪಿ ಸಿಂಗ್ ಸಲ್ಲಿಸಿದ ವಾದವನ್ನು ನ್ಯಾಯಾಲಯ ಒಪ್ಪಿಕೊಂಡಿದೆ.

ನವೆಂಬರ್ 20, 2014 ರಂದು, ಪ್ರಕರಣದಲ್ಲಿ ಸಿಬಿಐ ಸಲ್ಲಿಸಿದ್ದ ಮುಕ್ತಾಯ ವರದಿಯನ್ನು ಸ್ವೀಕರಿಸಲು ನಿರಾಕರಿಸಿದ್ದ ಕೋರ್ಟ್, ಮಾಜಿ ಸಂಸದ ದರ್ದಾ ಅವರು ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಬರೆದ ಪತ್ರದಲ್ಲಿ "ತಪ್ಪು ಮಾಹಿತಿ" ನೀಡಿದ್ದಾರೆ ಎಂದು ಹೇಳಿ, ಹೆಚ್ಚಿನ ತನಿಖೆ ನಡೆಸುವಂತೆ ಸೂಚಿಸಿತ್ತು.

SCROLL FOR NEXT