ದೇಶ

ಭೂಕುಸಿತ ಅವಶೇಷ ತೆರವುಗೊಳಿಸುವಾಗಲೇ ಭೀಕರ ದುರಂತ: ಬೃಹತ್ ಜೆಸಿಬಿ ಮೇಲೆ ಬಿದ್ದ ಬೃಹತ್ ಬಂಡೆ; ವಿಡಿಯೋ ವೈರಲ್

Srinivasamurthy VN

ಶಿಮ್ಲಾ: ಭಾರಿ ಮಳೆ ಮತ್ತು ಭೀಕರ ಭೂ ಕುಸಿತದಿಂದಾಗಿ ತತ್ತರಿಸಿ ಹೋಗಿರುವ ಹಿಮಾಚಲ ಪ್ರದೇಶದಲ್ಲಿ ಮತ್ತೊಂದು ಭೀಕರ ಭೂಕುಸಿತದ ವಿಡಿಯೋ ವೈರಲ್ ಆಗಿದೆ.

ಹಿಮಾಚಲ ಪ್ರದೇಶದಲ್ಲಿ ಹೆದ್ದಾರಿಯಲ್ಲಿ ಭೂಕುಸಿತದಿಂದ ಸಂಭವಿಸಿದ ಅವಶೇಷಗಳನ್ನು ತೆರವು ಮಾಡುವ ಸಂದರ್ಭದಲ್ಲಿಯೇ ಭೂ ಕುಸಿತ ಸಂಭವಿಸಿದ್ದು ಬೃಹತ್ ಜೆಸಿಬಿ ಮೇಲೆ ಬೃಹತ್ ಬಂಡೆ ಅಪ್ಪಳಿಸಿದ್ದು, ಕೂದಲೆಳೆ ಅಂತರದಲ್ಲಿ ಜೆಸಿಬಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಹಿಮಾಚಲ ಪ್ರದೇಶದ ಮಂಡಿ-ಕುಲು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ಮಂಡಿಯ ಚಂಡೀಗಢ-ಮನಾಲಿ ಹೆದ್ದಾರಿಯಲ್ಲಿ 6 ಮೈಲುಗಳ ಬಳಿ ಭೂಕುಸಿತದ ನಂತರ ಹಾಲಿ ನಡೆಯುತ್ತಿರುವ ಅವಶೇಷಗಳ ತೆರವು ಕಾರ್ಯಾಚರಣೆ ಸಮಯದಲ್ಲಿ ಬೃಹತ್ ಜೆಸಿಬಿ ಯಂತ್ರದ ಮೇಲೆ ಅವಶೇಷಗಳು ಬಿದ್ದಿವೆ.

ಆರಂಭದಲ್ಲಿ ಮಣ್ಣು ಕುಸಿಯಿತಾದರೂ ನೋಡ ನೋಡುತ್ತಲೇ ಬೃಹತ್ ಬಂಡೆಗಲ್ಲುಗಳು ರಸ್ತೆ ಅಪ್ಪಳಿಸಲಾರಂಭಿಸಿದವು. ಈ ವೇಳೆ ಭಾರಿ ಗಾತ್ರದ ಬಂಡೆಯೊಂದು ಜೆಸಿಬಿ ಮೇಲೆ ಬಿದ್ದಿದ್ದು, ಈ ವೇಳೆ ಅಪಾಯನ್ನು ಅರಿತ ಜೆಸಿಬಿ ಚಾಲಕ ಕ್ಷಣ ಮಾತ್ರದಲ್ಲಿ ಜೆಸಿಬಿಯಿಂದ ಕೆಳಗಿಳಿದು ಓಡಿ ಪ್ರಾಣ ಉಳಿಸಿಕೊಂಡಿದ್ದಾನೆ.

ಕಾರ್ಯಾಚರಣೆಯ ಸಂದರ್ಭದಲ್ಲಿ ಅಲ್ಲಿ ಅಧಿಕಾರಿಗಳು ಮತ್ತು ಇತರೆ ಜನರು ಅಲ್ಲಿ ನೆರೆದಿದ್ದರು. ಈ ವೇಳೆ ಅವರ ಮೇಲೂ ಬಂಡಕಲ್ಲಗಳು ಬೀಳುವ ಅಪಾಯವಿತ್ತು. ಆದರೆ ಎಲ್ಲರೂ ದೂರಕ್ಕೆ ಓಡಿ ಬರುವ ಮೂಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಗಾಯಗೊಂಡವರ ಕುರಿತು ಮಾಹಿತಿ ದೊರೆತಿಲ್ಲ.. ಪ್ರಸ್ತುತ ಮುಂಜಾಗ್ರತಾ ಕ್ರಮವಾಗಿ ತೆರವು ಕಾರ್ಯಾಚರಣೆಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಸ್ಥಳಕ್ಕೆ ಅಧಿಕಾರಿಗಳು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. 
 

SCROLL FOR NEXT