ದೇಶ

ಮಣಿಪುರ ಹಿಂಸಾಚಾರ: ಪ್ರಧಾನಿ ಹೇಳಿಕೆಗೆ ಆಗ್ರಹಿಸಿ ಪ್ರತಿಪಕ್ಷಗಳ ಪ್ರತಿಭಟನೆ, ಲೋಕಸಭೆ ಕಲಾಪ ನಾಳೆಗೆ ಮುಂದೂಡಿಕೆ

Lingaraj Badiger

ನವದೆಹಲಿ: ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರು ಸಂಸತ್ತಿನಲ್ಲಿ ಹೇಳಿಕೆ ನೀಡಬೇಕು ಎಂದು ಒತ್ತಾಯಿಸಿ ಪ್ರತಿಪಕ್ಷಗಳ ಸದಸ್ಯರು ಪಟ್ಟುಬಿಡದೆ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಲೋಕಸಭೆಯ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಲಾಗಿದೆ.

ಇಂದು ಕಲಾಪ ಆರಂಭಕ್ಕೂ ಮುನ್ನವೇ ಸಂಸತ್ತಿನ ಗಾಂಧಿ ಪ್ರತಿಮೆಯ ಬಳಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜು ಖರ್ಗೆ ಅವರ ನೇತೃತ್ವದಲ್ಲಿ ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸಿದವು.

ಈ ವೇಳೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, ಪ್ರಧಾನಿ ಮೋದಿ ಅವರು ಮಣಿಪುರ ಹಿಂಸಾಚಾರದ ಬಗ್ಗೆ ಸಂಸತ್ತಿನಲ್ಲಿ ಸಮಗ್ರ ಹೇಳಿಕೆ ನೀಡುವುದು ಅವರ ಕರ್ತವ್ಯ ಎಂದು ಹೇಳಿದರು.

ಲೋಕಸಭೆ ಕಲಾಪ ಆರಂಭವಾದ ನಂತರವೂ ಮೋದಿ ಹೇಳಿಕೆಗೆ ಆಗ್ರಹಿಸಿ ಪ್ರತಿಪಕ್ಷಗಳ ಸದಸ್ಯರು ನಿರಂತರ ಪ್ರತಿಭಟನೆ ನಡೆಸಿದರು. ಹೀಗಾಗಿ ಸ್ಪೀಕರ್ ಓಂ ಬಿರ್ಲಾ ಅವರು ಲೋಕಸಭೆಯ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು.

ಮತ್ತೆ ಸದನ ಸಮಾವೇಶಗೊಳ್ಳುತ್ತಿದ್ದಂತೆಯೇ, ವಿರೋಧಪಕ್ಷಗಳ ಸದಸ್ಯರು ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗುತ್ತಾ ಸ್ಪೀಕರ್ ಪೀಠದತ್ತ ಧಾವಿಸಿ ಪ್ರತಿಭಟನೆಯನ್ನು ಮುಂದುವರೆಸಿದರು. 

ಈ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸದನದಲ್ಲಿ ಮಣಿಪುರ ಹಿಂಸಾಚಾರದ ಕುರಿತು ಚರ್ಚಿಸುವುದಾಗಿ ಭರವಸೆ ನೀಡಿದರು. ಇದಕ್ಕೆ ಒಪ್ಪದ ಪ್ರತಿಪಕ್ಷಗಳು ಧರಣಿ ಮುಂದುವರೆಸಿದ ಹಿನ್ನೆಲೆಯಲ್ಲಿ ಸ್ಪೀಕರ್ ಕಲಾಪವನ್ನು ನಾಳೆಗೆ ಮುಂದೂಡಿದರು.

SCROLL FOR NEXT