ದೇಶ

ದಾಳಿ ವೇಳೆ ಸಿಕ್ಕಿಬೀಳುವ ಭಯದಲ್ಲಿ 5 ಸಾವಿರ ರೂ ಲಂಚದ ಹಣವನ್ನೇ ನುಂಗಿ ಹಾಕಿದ ಅಧಿಕಾರಿ!

Srinivasamurthy VN

ಜಬಲ್ ಪುರ: ಕಂದಾಯ ಇಲಾಖೆಯ ಅಧಿಕಾರಿಯೊಬ್ಬರು ಅಧಿಕಾರಿಗಳ ದಾಳಿ ವೇಳೆ ಸಿಕ್ಕಿ ಬೀಳುವ ಭಯದಲ್ಲಿ ತಾವು ಪಡೆದಿದ್ದ ಲಂಚದ ಹಣವನ್ನೇ ನುಂಗಿ ಹಾಕಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಮಧ್ಯಪ್ರದೇಶದ ಜಬಲ್ ಪುರದ ಕಟ್ನಿಯಲ್ಲಿ ಕಂದಾಯ ಇಲಾಖೆಯ ಅಧಿಕಾರಿಯೊಬ್ಬರು ಲೋಕಾಯುಕ್ತ ವಿಶೇಷ ಪೊಲೀಸ್ ಘಟಕದ (ಎಸ್‌ಪಿಇ) ತಂಡದ ವೇಳೆ ತಾವು ಪಡೆದಿದ್ದ 5 ಸಾವಿರ ರೂ ಲಂಚದ ಹಣವನ್ನು ನುಂಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಧಿಕಾರಿಗಳು ಬೀಸಿದ ಬಲೆಯಲ್ಲಿ ಪಟ್ವಾರಿ ಗಜೇಂದ್ರ ಸಿಂಗ್ ಅವರು ತಮ್ಮ ಖಾಸಗಿ ಕಚೇರಿಯಲ್ಲಿ 5,000 ರೂ ಲಂಚ ಪಡೆದ ಘಟನೆ ಸೋಮವಾರ ನಡೆದಿದೆ ಎಂದು ಎಸ್‌ಪಿಇ ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ಸಾಹು ತಿಳಿಸಿದ್ದಾರೆ.

"ಬರ್ಖೇಡಾ ಗ್ರಾಮದ ವ್ಯಕ್ತಿಯೊಬ್ಬರು ಗಜೇಂದ್ರ ಸಿಂಗ್ ಲಂಚ ಕೇಳುತ್ತಿದ್ದಾರೆಂದು ಆರೋಪಿಸಿ ನಮಗೆ ದೂರು ನೀಡಿದ್ದರು. ಹಣವನ್ನು ತೆಗೆದುಕೊಂಡ ನಂತರ, ಗಜೇಂದ್ರ ಸಿಂಗ್ ಎಸ್‌ಪಿಇ ತಂಡವನ್ನು ಗುರುತಿಸಿ ಅದನ್ನು ಅಲ್ಲಿಯೇ ಬಾಯಿಗೆ ಹಾಕಿಕೊಂಡು ನುಂಗಿದ್ದಾರೆ. ಬಳಿಕ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರು ಚೆನ್ನಾಗಿದ್ದಾರೆ ಎಂದು ವೈದ್ಯರು ಹೇಳಿದರು," ಎಂದು ಅಧಿಕಾರಿ ಹೇಳಿದರು.

ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
 

SCROLL FOR NEXT