ದೇಶ

ಅವಿಶ್ವಾಸ ನಿರ್ಣಯ ಮಂಡನೆ: ಸ್ಪೀಕರ್‌ಗೆ ಪ್ರಸ್ತಾವನೆ ಸಲ್ಲಿಸಿದ ಕಾಂಗ್ರೆಸ್‌; ಸ್ಪೀಕರ್ ಓಂಬಿರ್ಲಾ ಹೇಳಿದ್ದೇನು?

Srinivasamurthy VN

ನವದೆಹಲಿ: ಮಣಿಪುರ ಕ್ರೌರ್ಯ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರದ ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಮುಂದಾಗಿರುವ ವಿಪಕ್ಷಗಳು ಈ ಸಂಬಂಧ ಮೊದಲ ಹೆಜ್ಜೆಯನ್ನಿಟ್ಟಿದ್ದು ಅವಿಶ್ವಾಸ ನಿರ್ಣಯ ಮಂಡಿಸಲು ಸ್ಪೀಕರ್‌ಗೆ ಕಾಂಗ್ರೆಸ್‌ ಪ್ರಸ್ತಾವನೆ ಸಲ್ಲಿಸಿದೆ.

ಮಣಿಪುರ ವಿಷಯಕ್ಕೆ ಸಂಬಂಧಿಸಿದಂತೆ ಎನ್‌ಡಿಎ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪಣ ತೊಟ್ಟಿರುವ ‘ಇಂಡಿಯಾ’ ವಿಪಕ್ಷಗಳ ಮೈತ್ರಿಕೂಟವು, ಲೋಕಸಭೆಯಲ್ಲಿ ಬುಧವಾರವೇ ಅವಿಶ್ವಾಸ ನಿರ್ಣಯ ಮಂಡಿಸಲು ಸ್ಪೀಕರ್‌ಗೆ ಕಾಂಗ್ರೆಸ್‌ ಪ್ರಸ್ತಾವನೆ ಸಲ್ಲಿಸಿದೆ. ಈ ಕುರಿತು ಸ್ಪೀಕರ್‌ ಅವರಿಗೆ ಲಿಖಿತವಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಂಸತ್‌ನ ಕಾಂಗ್ರೆಸ್‌ ಪಕ್ಷದ ಉಪನಾಯಕ ಗೌರವ್‌ ಗೋಗಿ ಮಾಹಿತಿ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನ ಸಂಸದರಿಗೆ ವಿಪ್ ಜಾರಿ ಮಾಡಲಾಗಿದ್ದು, ಇಂದು ಲೋಕಸಭೆಗೆ ಕಡ್ಡಾಯವಾಗಿ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಬೆಳಗ್ಗೆ ಕಾಂಗ್ರೆಸ್ ಸಂಸದೀಯ ಸಭೆ ನಡೆದಿದ್ದು ಒಟ್ಟು 26 ಪಕ್ಷಗಳ ಒಕ್ಕೂಟ ಇಂಡಿಯಾದಿಂದ ಅವಿಶ್ವಾಸ ನಿರ್ಣಯ ಮಂಡನೆ ನಡೆಯಲಿದೆ ಎಂದು ಗೌರವ್‌ ಗೋಗಿ ಹೇಳಿದ್ದಾರೆ. ಬಳಿಕ ರಾಜ್ಯಸಭೆಯಲ್ಲಿಯೂ ಇದೇ ತಂತ್ರ ಹೂಡಲು ತೀರ್ಮಾನಿಸಲಾಗಿದೆ ಎಂದು ವಿರೋಧ ಪಕ್ಷಗಳ ಮೂಲಗಳು ತಿಳಿಸಿವೆ. 

ಆಗಸ್ಟ್ 11 ರವರೆಗೆ ಮುಂಗಾರು ಅಧಿವೇಶನ ನಡೆಯಲಿದೆ. 23 ದಿನಗಳ ಕಾಲ ನಡೆಯುವ ಈ ಅಧಿವೇಶನದಲ್ಲಿ ದೆಹಲಿ ಸುಗ್ರೀವಾಜ್ಞೆ ಸೇರಿದಂತೆ 31 ಮಸೂದೆಗಳನ್ನು ಮಂಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ. 

ಸಮಯ ನಿಗದಿಪಡಿಸುತ್ತೇವೆ: ಸ್ಪೀಕರ್ ಓಂಬಿರ್ಲಾ
ಇನ್ನು ವಿಪಕ್ಷಗಳ ಒಕ್ಕೂಟ ಸಲ್ಲಿಕೆ ಮಾಡಿರುವ ಅವಿಶ್ವಾಸ ನಿರ್ಣಯ ಪ್ರಸ್ತಾವನೆ ಕುರಿತು ಮಾತನಾಡಿದ ಸ್ಪೀಕರ್ ಓಂ ಬಿರ್ಲಾ ಅವರು, ಚರ್ಚೆಯ ಸಮಯವನ್ನು ನಿಗದಿಪಡಿಸಿ ಸದನಕ್ಕೆ ತಿಳಿಸಲಾಗುವುದು ಎಂದರು. 'ಮಧ್ಯಾಹ್ನ 12 ಗಂಟೆಗೆ ಸದನದ ಸಭೆ ಮತ್ತು ಕಾಗದಗಳನ್ನು ಮೇಜಿನ ಮೇಲೆ ಇರಿಸಿದ ನಂತರ, ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಗೊಗೊಯ್ ಅವರಿಂದ ನೋಟಿಸ್ ಸ್ವೀಕರಿಸಲಾಗಿದೆ. ಎಲ್ಲಾ ಪಕ್ಷಗಳೊಂದಿಗೆ ಸಮಾಲೋಚಿಸಿದ ನಂತರ ಚರ್ಚೆಗೆ ದಿನಾಂಕ ಮತ್ತು ಸಮಯವನ್ನು ಅವರು ನಿಗದಿಪಡಿಸಲಾಗುತ್ತದೆ ಎಂದು ಬಿರ್ಲಾ ಹೇಳಿದರು.

ಕಾಂಗ್ರೆಸ್ ಸಂಸದೀಯ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಸೇರಿದಂತೆ ಇಂಡಿಯಾ ಮೈತ್ರಿಕೂಟದ ಸದಸ್ಯರ ತಲೆ ಎಣಿಕೆ ವೇಳೆ ಎದ್ದುನಿಂತು ಅವರು ನಿರ್ಣಯದ ಅಂಗೀಕಾರವನ್ನು ಬೆಂಬಲಿಸಿದರು. ಒಟ್ಟು 50 ಸದಸ್ಯರು ನಿರ್ಣಯದ ಅಂಗೀಕಾರವನ್ನು ಬೆಂಬಲಿಸಿದರು ಎಂದು ಹೇಳಲಾಗಿದೆ. 

SCROLL FOR NEXT