ಭೋಪಾಲ್: ಮಧ್ಯಪ್ರದೇಶದಲ್ಲಿ 2018 ರಲ್ಲಿ 526 ಇದ್ದ ಹುಲಿಗಳ ಸಂಖ್ಯೆ 2022ರಲ್ಲಿ 785 ಕ್ಕೆ ಏರಿಕೆಯಾಗಿದೆ ಎಂದು ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಶನಿವಾರ ಅಂತರರಾಷ್ಟ್ರೀಯ ಹುಲಿ ದಿನದಂದು ಹೇಳಿದ್ದಾರೆ.
ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದರ್ ಯಾದವ್ ಅವರು ಹುಲಿಗಳ ಸಂಖ್ಯೆಯಲ್ಲಿ ಅಗ್ರಸ್ಥಾನ ಉಳಿಸಿಕೊಂಡ ಮಧ್ಯಪ್ರದೇಶವನ್ನು ಅಭಿನಂದಿಸಿದ್ದಾರೆ.
ನ್ಯಾಷನಲ್ ಟೈಗರ್ ಕನ್ಸರ್ವೇಶನ್ ಅಥಾರಿಟಿ ಮತ್ತು ವೈಲ್ಡ್‌ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಬಿಡುಗಡೆ ಮಾಡಿರುವ 'ಟೈಗರ್ಸ್ ಸ್ಟೇಟಸ್: ಕೋ-ಪ್ರೆಡೇಟರ್ಸ್ & ಪ್ರೆ ಇನ್ ಇಂಡಿಯಾ-2022' ವರದಿಯ ಪ್ರಕಾರ, ಮಧ್ಯಪ್ರದೇಶ ದೇಶದಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿದ್ದು, ಕರ್ನಾಟಕ(563) ನಂತರದ ಸ್ಥಾನದಲ್ಲಿದೆ ಮತ್ತು ಉತ್ತರಾಖಂಡ(560) ಮೂರನೇ ಸ್ಥಾನದಲ್ಲಿದೆ.
ನಮ್ಮ ರಾಜ್ಯದ ಜನರ ಸಹಕಾರ ಮತ್ತು ಅರಣ್ಯ ಇಲಾಖೆಯ ಅವಿರತ ಪ್ರಯತ್ನದ ಫಲವಾಗಿ ಕಳೆದ ನಾಲ್ಕು ವರ್ಷಗಳಲ್ಲಿ ನಮ್ಮ ರಾಜ್ಯದಲ್ಲಿ ಹುಲಿಗಳ ಸಂಖ್ಯೆ 526 ರಿಂದ 785 ಕ್ಕೆ ಏರಿರುವುದು ಸಂತಸದ ವಿಷಯ ಎಂದು ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರು ಟ್ವೀಟ್ ಮಾಡಿದ್ದಾರೆ.