ದೇಶ

ನೂತನ ರಾಷ್ಟ್ರೀಯ ಶಿಕ್ಷಣ ನೀತಿ ದೇಶದ ಎಲ್ಲಾ ಭಾಷೆಗಳನ್ನು ಗೌರವಿಸುತ್ತದೆ: ಪ್ರಧಾನಿ ಮೋದಿ

Nagaraja AB

ನವದೆಹಲಿ: ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ದೇಶದ ಪ್ರತಿಯೊಂದು ಭಾಷೆಗೆ ಗೌರವ ಮತ್ತು ಮನ್ನಣೆ ನೀಡುತ್ತದೆ ಎಂದು ಶನಿವಾರ ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ತಮ್ಮ ಸ್ವಾರ್ಥಕ್ಕಾಗಿ ಭಾಷೆಯನ್ನು ರಾಜಕೀಯಗೊಳಿಸಲು ಪ್ರಯತ್ನಿಸುವವರು ತಮ್ಮ ಅಂಗಡಿಗಳನ್ನು ಮುಚ್ಚಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. 

ಎನ್‌ಇಪಿ ಮೂರನೇ ವಾರ್ಷಿಕೋತ್ಸವ ಅಂಗವಾಗಿ 'ಅಖಿಲ ಭಾರತೀಯ ಶಿಕ್ಷಾ ಸಮಾಗಮ್' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, ವಿದ್ಯಾರ್ಥಿಗಳ ಸಾಮರ್ಥ್ಯದ ಬದಲಿಗೆ ಅವರ ಭಾಷೆಯ ಆಧಾರದ ಮೇಲೆ ಅವರನ್ನು ನಿರ್ಣಯಿಸುವುದೇ ದೊಡ್ಡ ಅನ್ಯಾಯ ಎಂದು ಹೇಳಿದರು. "ಮಾತೃಭಾಷೆಯಲ್ಲಿನ ಶಿಕ್ಷಣವು ದೇಶದಲ್ಲಿನ ಎಲ್ಲಾ ವಿದ್ಯಾರ್ಥಿಗಳಿಗೆ ನ್ಯಾಯದ ಹೊಸ ರೂಪವಾಗಿದೆ. ಇದು ಸಾಮಾಜಿಕ ನ್ಯಾಯದ ಕಡೆಗೆ ಮಹತ್ವದ ಹೆಜ್ಜೆಯಾಗಿದೆ ಎಂದರು. 

ಹಲವಾರು ಅಭಿವೃದ್ಧಿ ಹೊಂದಿದ ದೇಶಗಳು ತಮ್ಮ ಸ್ಥಳೀಯ ಭಾಷೆಗಳಿಗೆ ಆದ್ಯತೆ ನೀಡಿದ್ದು, ಭಾರತದಲ್ಲಿ ಹಲವು ಭಾಷೆಗಳಿದ್ದರೂ ಇಂಗ್ಲಿಷ್ ಮಾತನಾಡಲು ಸಾಧ್ಯವಾಗದವರನ್ನು ನಿರ್ಲಕ್ಷಿಸಲಾಗಿದೆ ಮತ್ತು ಅವರ ಪ್ರತಿಭೆಯನ್ನು ಗುರುತಿಸಲಾಗಿಲ್ಲ ಪರಿಣಾಮವಾಗಿ ಗ್ರಾಮೀಣ ಪ್ರದೇಶದ ಮಕ್ಕಳು ಹೆಚ್ಚು ಹಿಂದುಳಿಯುವಂತಾಗಿದೆ. ಈಗ ದೇಶದಲ್ಲಿ ಎನ್ ಇಪಿ ಜಾರಿಯಿಂದ ಈ ನಂಬಿಕೆಯನ್ನು ದೂರವಿಡಲು ಪ್ರಾರಂಭಿಸಿದೆ. ವಿಶ್ವಸಂಸ್ಥೆಯಲ್ಲಿಯೂ ಸಹ ನಾನು ಭಾರತೀಯ ಭಾಷೆಯಲ್ಲಿ ಮಾತನಾಡುತ್ತೇನೆ ಎಂದು ಅವರು ಹೇಳಿದರು. 

ಸಮಾಜ ವಿಜ್ಞಾನದಿಂದ ಇಂಜಿನಿಯರಿಂಗ್ ವರೆಗಿನ ವಿಷಯಗಳನ್ನು ಈಗ ಭಾರತೀಯ ಭಾಷೆಗಳಲ್ಲಿ ಕಲಿಸಲಾಗುವುದು, ವಿದ್ಯಾರ್ಥಿಗಳು ಭಾಷೆಯ ಮೇಲೆ ವಿಶ್ವಾಸವಿಟ್ಟಾಗ ಅವರಲ್ಲಿರುವ ಕೌಶಲ್ಯ ಮತ್ತು ಪ್ರತಿಭೆ ಯಾವುದೇ ನಿರ್ಬಂಧಗಳಿಲ್ಲದೆ ಹೊರಹೊಮ್ಮುತ್ತದೆ’ ಎಂದರು. ಹೊಸ ಸಾಧ್ಯತೆಗಳ ನರ್ಸರಿಯಾಗಿ ಜಗತ್ತು ಭಾರತವನ್ನು ನೋಡುತ್ತಿದೆ ಮತ್ತು ಅಲ್ಲಿ ಐಐಟಿ ಕ್ಯಾಂಪಸ್‌ಗಳನ್ನು ಸ್ಥಾಪಿಸಲು ಹಲವಾರು ದೇಶಗಳು ಸರ್ಕಾರವನ್ನು ಸಂಪರ್ಕಿಸುತ್ತಿವೆ ಎಂದು ಪ್ರಧಾನಿ ಹೇಳಿದರು.

ತಾಂಜಾನಿಯಾದಲ್ಲಿ ಒಂದು ಮತ್ತು ಅಬುಧಾಬಿಯಲ್ಲಿ -- ಈಗಾಗಲೇ ಕಾರ್ಯಾಚರಣೆಯನ್ನು ಪ್ರಾರಂಭಿಸಲಿವೆ. ವಿವಿಧ ಜಾಗತಿಕ ವಿಶ್ವವಿದ್ಯಾನಿಲಯಗಳು ಸಹ ನಮ್ಮನ್ನು ತಲುಪುತ್ತಿವೆ, ಭಾರತದಲ್ಲಿ ಕ್ಯಾಂಪಸ್‌ಗಳನ್ನು ಸ್ಥಾಪಿಸಲು ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸುತ್ತಿವೆ.  ಭಾರತವನ್ನು ಸಂಶೋಧನೆ ಮತ್ತು ನಾವೀನ್ಯತೆಗಳ ಕೇಂದ್ರವನ್ನಾಗಿ ಮಾಡುವ ಗುರಿಯನ್ನು ಎನ್ಇಪಿ ಹೊಂದಿದೆ ಮತ್ತು ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆಗಳು ಮತ್ತು ಭವಿಷ್ಯದ ತಂತ್ರಜ್ಞಾನಕ್ಕೆ ಸಮಾನ ಪ್ರಾಮುಖ್ಯತೆಯನ್ನು ನೀಡಿದೆ ಎಂದು ಮೋದಿ ಹೇಳಿದರು. 

ಇದೇ ಸಂದರ್ಭದಲ್ಲಿ 12 ಭಾರತೀಯ ಭಾಷೆಗಳಿಗೆ ಭಾಷಾಂತರಿಸಿದ ಶಿಕ್ಷಣ ಮತ್ತು ಕೌಶಲ್ಯ ಪಠ್ಯಕ್ರಮದ ಪುಸ್ತಕಗಳನ್ನು ಪ್ರಧಾನಿ  ಮೋದಿ ಬಿಡುಗಡೆ ಮಾಡಿದರು. ನವದೆಹಲಿಯ ಹಳೆಯ ಪ್ರಗತಿ ಮೈದಾನದಲ್ಲಿರುವ ಭಾರತ ಮಂಟಪದಲ್ಲಿ ಎರಡು ದಿನಗಳ ಅಖಿಲ ಭಾರತೀಯ ಶಿಕ್ಷಾ ಸಮಾಗಮ್ ನಡೆಯುತ್ತಿದೆ.

SCROLL FOR NEXT