ದೇಶ

ಮಕ್ಕಳ ಶಾಲಾ ಪ್ರವೇಶಕ್ಕೆ ಆಧಾರ್ ಕಡ್ಡಾಯವಲ್ಲ: ಕೇಂದ್ರ ಸ್ಪಷ್ಟನೆ

Lingaraj Badiger

ನವದೆಹಲಿ: ಮಕ್ಕಳ ಶಾಲಾ ಪ್ರವೇಶಕ್ಕೆ ಆಧಾರ್ ಕಡ್ಡಾಯವಲ್ಲ. ಆಧಾರ್ ಕಾರ್ಡ್ ಇಲ್ಲ ಎಂಬ ಕಾರಣಕ್ಕೆ ಯಾವುದೇ ಮಗುವಿಗೆ ಶಾಲೆಗೆ ಪ್ರವೇಶ ನಿರಾಕರಿಸಬಾರದು ಎಂದು ಕೇಂದ್ರ ಸರ್ಕಾರ ಸೋಮವಾರ ಸ್ಪಷ್ಟಪಡಿಸಿದೆ.

2018 ಮತ್ತು 2021ರಲ್ಲಿ ಈ ಕುರಿತು ಹಿಂದಿನ ಪ್ರಕಟಣೆಗಳನ್ನು ಪುನರುಚ್ಚರಿಸಿದ ಕೇಂದ್ರ, ಕೆಲವು ಶಾಲೆಗಳು ಇನ್ನೂ ಪ್ರವೇಶಕ್ಕಾಗಿ ಆಧಾರ್ ಕಡ್ಡಾಯವಾಗಿ ನೀಡಬೇಕು ಎಂದು ಒತ್ತಾಯಿಸುತ್ತಿರುವ ವರದಿಗಳ ಹಿನ್ನಲೆಯಲ್ಲಿ ಈ ಸ್ಪಷ್ಟನೆ ನೀಡಿದೆ.

ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, "ಶಿಕ್ಷಣವು ಸಂವಿಧಾನದ ಸಮಕಾಲೀನ ಪಟ್ಟಿಯಲ್ಲಿದೆ ಮತ್ತು ಹೆಚ್ಚಿನ ಶಾಲೆಗಳು ಆಯಾ ರಾಜ್ಯ ಮತ್ತು ಕೇಂದ್ರಾಡಳಿತ ವ್ಯಾಪ್ತಿಗೆ ಬರುತ್ತವೆ. ಆದರೆ 05.09.2018 ರ ಸುತ್ತೋಲೆಯ ಪ್ರಕಾರ, ಆಧಾರ್ ಕಾರ್ಡ್ ಇಲ್ಲ ಎಂಬ ಕಾರಣಕ್ಕಾಗಿ ಮಕ್ಕಳಿಗೆ ಪ್ರವೇಶ ನಿರಾಕರಿಸಬಾರದು ಎಂದು ಹೇಳಿದರು.

ಯಾವುದೇ ಶಿಕ್ಷಣ ಸಂಸ್ಥೆ ಅಥವಾ ಮಂಡಳಿ ಮಕ್ಕಳ ದಾಖಲಾತಿಗೆ ಆಧಾರ್ ಕಾರ್ಡ್ ಅಗತ್ಯವೆಂದು ನಿಯಮ ರೂಪಿಸಿದರೆ, ಪೋಷಕರು ಸಂಬಂಧಿಸಿದ ಅಧಿಕಾರಿಗಳಿಗೆ ದೂರು ಸಲ್ಲಿಸಬಹುದು ಎಂಬ ಮಾಹಿತಿಯನ್ನು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಸೆಪ್ಟೆಂಬರ್ 5, 2018ರ ಪ್ರಕಟನೆಯಲ್ಲಿ ತಿಳಿಸಿತ್ತು.

SCROLL FOR NEXT