ದೇಶ

ಒಳ್ಳೆಯ ಬಟ್ಟೆ, ಸನ್‌ಗ್ಲಾಸ್ ಧರಿಸಿದ್ದಕ್ಕಾಗಿ ದಲಿತ ವ್ಯಕ್ತಿಗೆ ಥಳಿಸಿದ ಮೇಲ್ವರ್ಗದ ಗುಂಪು, ಪ್ರಕರಣ ದಾಖಲು

Ramyashree GN

ಪಲನಪುರ: ಗುಜರಾತ್‌ನ ಬನಸ್ಕಾಂತ ಜಿಲ್ಲೆಯ ಹಳ್ಳಿಯೊಂದರಲ್ಲಿ ದಲಿತ ವ್ಯಕ್ತಿಯೊಬ್ಬರು ಉತ್ತಮ ಬಟ್ಟೆ ಮತ್ತು ಸನ್‌ಗ್ಲಾಸ್ ಧರಿಸಿದ್ದಕ್ಕಾಗಿ ಮೇಲ್ಜಾತಿಯ ವ್ಯಕ್ತಿಗಳ ಗುಂಪೊಂದು ಆತನನ್ನು ಥಳಿಸಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಮಂಗಳವಾರ ರಾತ್ರಿ ಪಾಲನ್‌ಪುರ ತಾಲೂಕಿನ ಮೋಟಾ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, ಹಲ್ಲೆಗೊಳಗಾದ ಸಂತ್ರಸ್ತ ಮತ್ತು ಆತನ ತಾಯಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಸಂತ್ರಸ್ತ ಜೆಗರ್ ಶೆಖಾಲಿಯಾ ನೀಡಿದ ದೂರಿನ ಆಧಾರದ ಮೇಲೆ ಏಳು ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ತಾನು ಉತ್ತಮ ಬಟ್ಟೆ ಮತ್ತು ಕನ್ನಡಕ ಧರಿಸಿದ್ದಕ್ಕಾಗಿ ಅಸಮಾಧಾನಗೊಂಡು ತನ್ನ ಮತ್ತು ನನ್ನ ತಾಯಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ಮಂಗಳವಾರ ಬೆಳಗ್ಗೆ ಸಂತ್ರಸ್ತ ತನ್ನ ಮನೆಯ ಹೊರಗೆ ನಿಂತಿದ್ದಾಗ ಏಳು ಮಂದಿ ಆರೋಪಿಗಳಲ್ಲಿ ಒಬ್ಬಾತ ಆತನ ಬಳಿಗೆ ಬಂದಿದ್ದಾನೆ. ಸಂತ್ರಸ್ತನನ್ನು ನಿಂದಿಸಿದ್ದಾನೆ ಮತ್ತು ಇತ್ತೀಚಿನ ದಿನಗಳಲ್ಲಿ ತುಂಬಾ ಮೆರೆಯುತ್ತಿರುವೆ. ಹೀಗೆ ಮುಂದುವರಿದರೆ, ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ.

ಅದೇ ದಿನ ರಾತ್ರಿ, ದೂರುದಾರರು ಗ್ರಾಮದ ದೇವಸ್ಥಾನದ ಹೊರಗೆ ನಿಂತಿದ್ದಾಗ ರಜಪೂತ ಉಪನಾಮವಿರುವ ಸಮುದಾಯದ ಆರು ಆರೋಪಿಗಳು ಅವರ ಕಡೆಗೆ ಬಂದಿದ್ದಾರೆ. ಕೋಲುಗಳನ್ನು ಹಿಡಿದು ಬಂದಿದ್ದ ಅವರು, ಉತ್ತಮವಾದ ಬಟ್ಟೆಗಳು ಮತ್ತು ಸನ್‌ಗ್ಲಾಸ್‌ ಅನ್ನು ಏಕೆ ಧರಿಸುತ್ತಿರುವೆ ಎಂದು ಪ್ರಶ್ನಿಸಿದ್ದಾರೆ.

ನಂತರ ಅವರನ್ನು ಥಳಿಸಿ ಡೈರಿ ಪಾರ್ಲರ್‌ನ ಹಿಂದಕ್ಕೆ ಎಳೆದೊಯ್ದಿದ್ದಾರೆ. ಮಗನನ್ನು ರಕ್ಷಿಸಲು ತಾಯಿ ಧಾವಿಸಿದಾಗ ಆಕೆಯ ಮೇಲೂ ಹಲ್ಲೆ ನಡೆಸಿ ಕೊಲೆ ಬೆದರಿಕೆಯೊಡ್ಡಿದ್ದಾರೆ. ಅವರು ಆಕೆಯ ಬಟ್ಟೆಗಳನ್ನು ಹರಿದಿದ್ದಾರೆ ಎಂದು ದೂರನ್ನು ಉಲ್ಲೇಖಿಸಿ ಪೊಲೀಸರು ತಿಳಿಸಿದ್ದಾರೆ.

ಏಳು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳ ಅಡಿಯಲ್ಲಿ ಗಧ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿಗಳ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿಯೂ ಪ್ರಕರಣ ದಾಖಲಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

SCROLL FOR NEXT