ದೇಶ

ಒಡಿಶಾ: ಮೂರು ರೈಲುಗಳ ಮಧ್ಯೆ ಭೀಕರ ಅಪಘಾತ; 207ಕ್ಕೇರಿದ ಸಾವಿನ ಸಂಖ್ಯೆ, ಪ್ರಧಾನಿ ಮೋದಿ ಸಂತಾಪ

Srinivasamurthy VN

ಭುವನೇಶ್ವರ: ಒಡಿಶಾದಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ ಎರಡಲ್ಲ.. ಬದಲಿಗೆ ಮೂರು ರೈಲುಗಳು ಢಿಕ್ಕಿಯಾಗಿವೆ ಎಂದು ತಿಳಿದುಬಂದಿದ್ದು, ಈ ದುರ್ಘಟನೆಯಲ್ಲಿ ಸಾವಿಗೀಡಾದವರ ಸಂಖ್ಯೆ 207 ದಾಟಿದೆ ಎನ್ನಲಾಗಿದೆ.

ಒಡಿಶಾದಲ್ಲಿ ಏಕಕಾಲಕ್ಕೆ ಒಂದಲ್ಲ, ಎರಡಲ್ಲ, ಮೂರು ರೈಲುಗಳ ಮಧ್ಯೆ ಅಪಘಾತ ಸಂಭವಿಸಿದೆ. ಒಡಿಶಾದ ಬಾಲಾಸೋರ್‌ ಜಿಲ್ಲೆಯಲ್ಲಿ ಏಕಕಾಲಕ್ಕೆ ಎರಡು ಪ್ಯಾಸೆಂಜರ್‌ ಹಾಗೂ ಒಂದು ಗೂಡ್ಸ್‌ ರೈಲುಗಳ ಮಧ್ಯೆ ಡಿಕ್ಕಿಯಾಗಿದೆ ಎಂದು ವರದಿಯಾಗಿದೆ. ಮೊದಲು ಕೋರಮಂಡಲ ಎಕ್ಸ್‌ಪ್ರೆಸ್‌ ರೈಲು ಹಳಿ ತಪ್ಪಿದೆ. ಹಳಿತಪ್ಪಿದ ಬೋಗಿಗಳು ಪಕ್ಕದ ಹಳಿಗಳ ಮೇಲೆ ಬಿದ್ದಿದೆ. ಆಗ, ಮತ್ತೊಂದು ಪ್ಯಾಸೆಂಜರ್‌ ರೈಲು ಹಾಗೂ ಗೂಡ್ಸ್‌ ರೈಲು ಡಿಕ್ಕಿಯಾಗಿವೆ. 

200 ಕ್ಕೂ ಹೆಚ್ಚು ಶವಗಳು ಪತ್ತೆಯಾಗಿವೆ, ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಒಡಿಶಾ ಅಗ್ನಿಶಾಮಕ ಸೇವೆಗಳ ಡಿಜಿ ಸುಧಾಂಶು ಸಾರಂಗಿ ತಡರಾತ್ರಿ ಮಾಹಿತಿ ನೀಡಿದ್ದಾರೆ.

ಕೋಲ್ಕತ್ತಾದಿಂದ ಚೆನ್ನೈಗೆ ಹೋಗುತ್ತಿದ್ದ ಕೋರಮಂಡಲ್ ಎಕ್ಸ್‌ಪ್ರೆಸ್, ಬೆಂಗಳೂರಿನಿಂದ ಕೋಲ್ಕತ್ತಾಗೆ ಹೋಗುತ್ತಿದ್ದ ಮತ್ತೊಂದು ರೈಲಿನ ಹಳಿತಪ್ಪಿದ ಬೋಗಿಗಳಿಗೆ ಡಿಕ್ಕಿ ಹೊಡೆದಿದೆ ಎಂದು ರೈಲ್ವೆ ಸಚಿವಾಲಯದ ವಕ್ತಾರ ಅಮಿತಾಭ್ ಶರ್ಮಾ ತಿಳಿಸಿದ್ದಾರೆ.

ಪ್ರಧಾನಿ ಮೋದಿ ಸಂತಾಪ
ಒಡಿಶಾದಲ್ಲಿ ಸಂಭವಿಸಿದ ರೈಲು ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.

‘ಒಡಿಶಾದಲ್ಲಿ ಸಂಭವಿಸಿದ ರೈಲು ಅಪಘಾತದಿಂದ ನೋವಾಗಿದೆ. ಮೃತರ ಕುಟುಂಬಕ್ಕೆ ನನ್ನ ಸಂತಾಪಗಳು. ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ. ರೈಲ್ವೆ ಸಚಿವರೊಂದಿಗೆ ಮಾತನಾಡಿ ಪರಿಸ್ಥಿತಿ ಅವಲೋಕಿಸಲಾಗಿದೆ. ಅಪಘಾತದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ ಮತ್ತು ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ನೆರವು ನೀಡಲಾಗುತ್ತಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
 

SCROLL FOR NEXT