ದೇಶ

ಒಡಿಶಾ ತ್ರಿವಳಿ ರೈಲು ದುರಂತ: ಘಟನಾ ಸ್ಥಳಕ್ಕೆ ಪ್ರಧಾನಿ ಮೋದಿ ಭೇಟಿ

Lingaraj Badiger

ನವದೆಹಲಿ: ಬೆಂಗಳೂರು-ಹೌರಾ ಎಕ್ಸ್‌ಪ್ರೆಸ್, ಶಾಲಿಮಾರ್-ಚೆನ್ನೈ ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲಿನ ನಡುವೆ ಒಡಿಶಾದ ಬಾಲಸೋರ್‌ನಲ್ಲಿ ಶುಕ್ರವಾರ ಸಂಭವಿಸಿದ ಭೀಕರ ರೈಲು ಅಪಘಾತದ ಸ್ಥಳಕ್ಕೆ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಪ್ರಧಾನಿ ಮೋದಿ ಅವರು ಇಂದು ಮಧ್ಯಾಹ್ನ ವಾಯುಪಡೆಯ ಹೆಲಿಕಾಪ್ಟರ್‌ನಲ್ಲಿ ಬಾಲಸೋರ್ ಆಗಮಿಸಿ, ಅಲ್ಲಿಂದ ಬಹನಾಗಾ ಬಜಾರ್ ನಿಲ್ದಾಣದಲ್ಲಿ ನಡೆದ ಅಪಘಾತ ಸ್ಥಳಕ್ಕೆ ಭೇಟಿ ನೀಡಿದರು.

ಪ್ರಧಾನಿ ಮೋದಿಗೆ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ಹಿರಿಯ ಅಧಿಕಾರಿಗಳು ಸಾಥ್ ನೀಡಿದರು. ಘಟನಾ ಸ್ಥಳದಲ್ಲಿ ಅಧಿಕಾರಿಗಳು ಮತ್ತು ರಕ್ಷಣಾ ಸಿಬ್ಬಂದಿಯಿಂದ ಪ್ರಧಾನಿ ಮೋದಿ ಮಾಹಿತಿ ಪಡೆದುಕೊಂಡರು.

ನಂತರ ಪ್ರಧಾನಿ ಮೋದಿ ಅವರು ಬಾಲಸೋರ್ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳ ಆರೋಗ್ಯ ವಿಚಾರಿಸಿದರು.

ಇದಕ್ಕು ಮುನ್ನ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಸ್ಥಿತಿ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪರಿಶೀಲಿಸಿದ್ದರು.

ಈ ಮಧ್ಯೆ ತ್ರಿವಳಿ ರೈಲು ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಹೆಚ್ಚುತ್ತಲೆ ಇದ್ದು, ಸಾವಿನ ಸಂಖ್ಯೆ 288ಕ್ಕೆ ಏರಿಕೆಯಾಗಿದೆ ಮತ್ತು 900ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

SCROLL FOR NEXT