ದೇಶ

ಒಡಿಶಾ ರೈಲು ದುರಂತ: ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ ಪರಿಹಾರ ಘೋಷಿಸಿದ ಸಿಎಂ ಪಟ್ನಾಯಕ್

Manjula VN

ಭುವನೇಶ್ವರ (ಒಡಿಶಾ): ಬಾಲಸೋರ್ ರೈಲು ದುರಂತ ಪ್ರಕರಣದಲ್ಲಿ ಮೃತಪಟ್ಟ ಕುಟುಂಬಗಳಿಗೆ ತಲಾ ರೂ.5 ಲಕ್ಷ ಪರಿಹಾರವನ್ನು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಭಾನುವಾರ ಘೋಷಣೆ ಮಾಡಿದ್ದಾರೆ.

ಈ ಸಂಬಂಧ ಒಡಿಶಾ ಮುಖ್ಯಮಂತ್ರಿಗಳ ಕಚೇರಿ ಮಾಹಿತಿ ನೀಡಿದ್ದು, ಮೃತರ ಕುಟುಂಬಗಳಿಗೆ 5 ಲಕ್ಷ ರೂಪಾಯಿ ಮತ್ತು ಗಂಭೀರ ಗಾಯಗಳಿಗೆ ಒಳಗಾದವರಿಗೆ 1 ಲಕ್ಷ ರೂಪಾಯಿ ನೆರವು ನೀಡಲಾಗುತ್ತದೆ ಎಂದು ಹೇಳಿದೆ. 

ರೈಲು ಅಪಘಾತದಲ್ಲಿ ಇಲ್ಲಿಯವರೆಗೆ 288 ಜನರನ್ನು ಸಾವನ್ನಪ್ಪಿದ್ದು, 1,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ರೈಲು ಅಪಘಾತದಲ್ಲಿ ಗಾಯಗೊಂಡವರು ಭುವನೇಶ್ವರ ಮತ್ತು ಬಾಲಸೋರ್ ನಡುವಿನ ವಿವಿಧ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದುರ್ಘಟನೆಯಲ್ಲಿ ಮೃತರ ಕುಟುಂಬಗಳಿಗೆ ಮುಖ್ಯಮಂತ್ರಿಗಳು ತೀವ್ರ ಸಂತಾಪ ಸೂಚಿಸಿದ್ದು, ಗಾಯಗೊಂಡವರು ಶೀಘ್ರಗತಿಯಲ್ಲಿ ಗುಣಮುಖರಾಗಲಿ ಎಂದು ಹಾರೈಸಿದ್ದಾರೆಂದು ತಿಳಿಸಿದೆ. 

ನಿನ್ನೆಯಷ್ಟೇ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಪಟ್ನಾಯಕ್ ಅವರು, ಪರಿಸ್ಥಿತಿ ಅವಲೋಕನ ಮಾಡಿದರು. ಇದೇ ವೇಳೆ ಗಾಯಾಳುಗಳ ಆರೋಗ್ಯವನ್ನೂ ವಿಚಾರಿಸಿದರು. ಏತನ್ಮಧ್ಯೆ, ರೈಲು ಮಾರ್ಗಗಳ ಪುನಃಸ್ಥಾಪನೆ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ. 

SCROLL FOR NEXT