ದೇಶ

'ಇಂದಿರಾ ಗಾಂಧಿ ಹತ್ಯೆಯ ಸ್ತಬ್ಧಚಿತ್ರ ಮೆರವಣಿಗೆ': ಕೆನಡಾ ವಿರುದ್ಧ ಭಾರತ ತೀವ್ರ ಆಕ್ರೋಶ

Lingaraj Badiger

ನವದೆಹಲಿ: ಬ್ರ್ಯಾಂಪ್ಟನ್ ನಲ್ಲಿ ಉಗ್ರವಾದಿಗಳು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆಯ ಸ್ತಬ್ಧಚಿತ್ರದ ಮೆರವಣಿಗೆ ನಡೆಸಲು ಕೆನಡಾ ಅನುಮತಿ ನೀಡಿರುವುದನ್ನು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಗುರುವಾರ ತೀವ್ರವಾಗಿ ಖಂಡಿಸಿದ್ದಾರೆ.

ಜೂನ್ 6 ರಂದು ಆಪರೇಷನ್ ಬ್ಲೂ ಸ್ಟಾರ್‌ನ 39ನೇ ವಾರ್ಷಿಕೋತ್ಸವಕ್ಕು ಮುನ್ನ ಜೂನ್ 4 ರಂದು ಕೆನಡಾದ ಬ್ರಾಂಪ್ಟನ್‌ನಲ್ಲಿ ಖಲಿಸ್ತಾನಿ ಬೆಂಬಲಿಗರು ನಡೆಸಿದ ಪರೇಡ್‌ನ ಚಿತ್ರಗಳು ಮತ್ತು ವೀಡಿಯೊಗಳು ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದವು.

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಕೆನಡಾದ ಅಧಿಕಾರಿಗಳೊಂದಿಗೆ ಮಾತನಾಡಬೇಕು ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರನ್ನು ಕಾಂಗ್ರೆಸ್ ಒತ್ತಾಯಿಸಿತ್ತು.
 
ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಜೈಶಂಕರ್, ಭಾರತ ವಿರೋಧಿ ಸಂಘಟನೆಗಳಿಗೆ ತನ್ನ ನೆಲದಲ್ಲಿ ಇಂತಹ ಕೃತ್ಯಗಳನ್ನು ನಡೆಸಲು ಕೆನಡಾ ಅವಕಾಶ ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರತ್ಯೇಕತಾವಾದಿಗಳು, ಉಗ್ರಗಾಮಿಗಳು ಮತ್ತು ಹಿಂಸಾಚಾರವನ್ನು ಪ್ರತಿಪಾದಿಸುವ ಜನರಿಗೆ ಅವಕಾಶ ನೀಡುವ ಕೆನಡಾದ ಧೋರಣೆಯಲ್ಲಿ ಬೇರೆಯದ್ದೆ ರಾಜಕಾರಣ ಇದೆ ಎಂದು ಟೀಕಿಸಿದರು.

ಇದಕ್ಕೂ ಮುನ್ನ, ಭಾರತದಲ್ಲಿನ ಕೆನಡಾದ ಹೈ ಕಮಿಷನರ್ ಕೆಮರಾನ್ ಮ್ಯಾಕೆ ಅವರು ತಮ್ಮ ದೇಶದಲ್ಲಿ ನಡೆದ ಘಟನೆಯ ವರದಿಗಳಿಂದ ತಾವು "ಆತಂಕಗೊಂಡಿರುವುದಾಗಿ" ಎಂದು ಹೇಳಿದ್ದರು.

ಕೆನಡಾದಲ್ಲಿ ದ್ವೇಷ ಅಥವಾ ಹಿಂಸೆಯ ವೈಭವೀಕರಣಕ್ಕೆ ಯಾವುದೇ ಆಸ್ಪದವಿಲ್ಲ. ನಾನು ಇಂತಹ ಚಟುವಟಿಕೆಗಳನ್ನು ಖಂಡಿಸುತ್ತೇನೆ ಎಂದು ಮ್ಯಾಕೆ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

SCROLL FOR NEXT