ದೇಶ

ಮೋದಿ, ಮೋದಿ ಘೋಷಣೆ ಕೂಗುವ ಮೂಲಕ ಕೇಜ್ರಿವಾಲ್ ಭಾಷಣಕ್ಕೆ ಬಿಜೆಪಿ ಕಾರ್ಯಕರ್ತರಿಂದ ಅಡ್ಡಿ!

Lingaraj Badiger

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಗುರುವಾರ ಗುರು ಗೋಬಿಂದ್ ಸಿಂಗ್ ಇಂದ್ರಪ್ರಸ್ಥ ವಿಶ್ವವಿದ್ಯಾಲಯದ ಪೂರ್ವ ದೆಹಲಿ ಕ್ಯಾಂಪಸ್‌ ಉದ್ಘಾಟನಾ ಸಮಾರಂಭದಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಬಿಜೆಪಿ ಕಾರ್ಯಕರ್ತರು 'ಮೋದಿ, ಮೋದಿ' ಎಂಬ ಘೋಷಣೆ ಕೂಗುವ ಮೂಲಕ ಅಡ್ಡಿಪಡಿಸಿದರು ಆಡಳಿತಾರೂಢ ಎಎಪಿ ಆರೋಪಿಸಿದೆ.

ತಮ್ಮ ಭಾಷಣಕ್ಕೆ ಅಡ್ಡಿಪಡಿಸಿದವರ ವಿರುದ್ಧ ಹರಿಹಾಯ್ದ ಮುಖ್ಯಮಂತ್ರಿ, “ಇಂತಹ ಘೋಷಣೆ” ಕೂಗುವ ಮೂಲಕ ಶಿಕ್ಷಣ ವ್ಯವಸ್ಥೆ ಸುಧಾರಿಸಲು ಸಾಧ್ಯವಾದರೆ, ಅದು ಕಳೆದ 70 ವರ್ಷಗಳಲ್ಲಿ ಸುಧಾರಿಸುತ್ತಿತ್ತು ಎಂದು ಹೇಳಿದರು.

"ದಯವಿಟ್ಟು ಐದು ನಿಮಿಷ ಮಾತನಾಡಲು ಅವಕಾಶ ಕೊಡಿ. ನನಗೆ ಮಾತನಾಡಲು ಅವಕಾಶ ನೀಡುವಂತೆ ನಾನು ಬಿಜೆಪಿ ಮತ್ತು ಇತರ ಪಕ್ಷದವರನ್ನು ಕೇಳಿಕೊಳ್ಳುತ್ತೇನೆ" ಎಂದು ದೆಹಲಿ ಸಿಎಂ ಹೇಳಿದರು.

"ನನ್ನ ಆಲೋಚನೆಗಳು ಮತ್ತು ಸಿದ್ಧಾಂತವನ್ನು ನೀವು ಇಷ್ಟಪಡದಿರಬಹುದು. ನೀವು ಈ ಬಗ್ಗೆ ನನಗೆ ಹೇಳಿ. ಆದರೆ ಈ ರೀತಿ ಘೋಷಣೆ ಕೂಗುವುದು ಸರಿಯಲ್ಲ. ಈ ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಮಾತನಾಡುವ ಹಕ್ಕಿದೆ" ಎಂದು ಮತ್ತೆ ಅಡ್ಡಿಪಡಿಸಿದ ನಂತರ ಕೇಜ್ರಿವಾಲ್ ಹೇಳಿದರು.

ಕಾರ್ಯಕ್ರಮದ ವೇಳೆ ಬಿಜೆಪಿ ಕಾರ್ಯಕರ್ತರು ಗದ್ದಲ ಎಬ್ಬಿಸಿದರು. ಆದರೆ ಕೇಜ್ರಿವಾಲ್ ಅವರು ತಮ್ಮ ಅದ್ಭುತ ಉತ್ತರದ ಮೂಲಕ ಅವರನ್ನು ಮೌನವಾಗಿಸಿದ್ದಾರೆ ಎಂದು ಆಮ್ ಆದ್ಮಿ ಪಕ್ಷ ಹೇಳಿದೆ.

ಉದ್ಘಾಟನಾ ಕಾರ್ಯಕ್ರಮ ನಡೆಯುತ್ತಿರುವಾಗಲೇ ಕ್ಯಾಂಪಸ್‌ನ ಹೊರಗೆ ಎಎಪಿ ಮತ್ತು ಬಿಜೆಪಿ ಕಾರ್ಯಕರ್ತರು ಪರಸ್ಪರ ಘೋಷಣೆಗಳನ್ನು ಕೂಗಿದರು.

SCROLL FOR NEXT