ದೇಶ

ಗುಜರಾತ್: ಊಟದ ವಿಚಾರಕ್ಕೆ ಜಗಳ, ಹೋಟೆಲ್ ಮಾಲೀಕನಿಂದ ವ್ಯಕ್ತಿಯ ಹತ್ಯೆ

Manjula VN

ವಡೋದರಾ: ಕಡಿಮೆ ಆಹಾರ ನೀಡಿದ್ದಕ್ಕೆ ಅಕ್ಷೇಪ ವ್ಯಕ್ತಪಡಿಸಿದ ವ್ಯಕ್ತಿಯೊಬ್ಬರನ್ನು ಹೋಟೆಲ್ ಮಾಲೀಕನೊಬ್ಬ ಬಡಿದು ಹತ್ಯೆ ಮಾಡಿರುವ ಘಟನೆಯೊಂದು ಗುಜರಾತ್‌ನ ಮಹಿಸಾಗರ್ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ಮೃತ ವ್ಯಕ್ತಿಯನ್ನು ರಾಜು ವಾಂಕರ್ (45) ಎಂದು ಗುರ್ತಿಸಲಾಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರಾಜು ಅವರನ್ನು ವಡೋದರಾ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ಪ್ರಕಾರ ಆಟೋರಿಕ್ಷಾ ಚಾಲಕ ವಾಂಕರ್ ಜೂನ್ 7 ರಂದು ಊಟ ಮಾಡಲು ಹೋಟೆಲ್‌ಗೆ ತೆರಳಿದ್ದು, ಊಟದ ನಂದರ ಮನೆಗೆ ತೆಗೆದುಕೊಂಡು ಹೋಗಲು ಆಹಾರ ಪ್ಯಾಕ್ ಮಾಡುವಂತೆ ಹೋಟೆಲ್ ಸಿಬ್ಬಂದಿಗಳಿಗೆ ಮನವಿ ಮಾಡಿದ್ದಾರೆ. ಇದಕ್ಕೆ ಸಿಬ್ಬಂದಿಗಳು ಒಪ್ಪಿಲ್ಲ. ಕೊಟ್ಟ ಹಣಕ್ಕಿಂದ ಆಹಾರ ಕಡಿಮೆ ನೀಡಿರುವುದಾಗಿ ವಾಂಕರ್ ಅವರು ಮಾತಿನ ಚಕಮಕಿ ನಡೆಸಿದ್ದಾರೆ. ಜಾತಿ ನಂದನೆಗಳನ್ನು ಮಾಡಲಾಗಿದೆ. ಮಾತಿನ ಚಕಮಕಿ ತಾರಕಕ್ಕೇರಿದ್ದು, ಈ ವೇಳೆ ಹೋಟೆಲ್ ಮಾಲೀಕ ಹಾಗೂ ಕೌಂಟರ್ ಮಾನೇಜರ್ ಎಲ್ಲರೂ ಸೇರಿ ವಾಂಕರ್ ಅವರಿಗೆ ಥಳಿಸಿದ್ದಾರೆ.

ಈ ವೇಳೆ ವಾಂಕರ್ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ವಾಂಕರ್ ಸಾವನ್ನಪ್ಪಿದ್ದಾರೆ.

ಘಟನೆಗೆ ದಲಿತ ನಾಯಕ ಮತ್ತು ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೇವಾನಿ ಅವರು ತೀವ್ರ ಖಂಡನೆ ವ್ಯಕ್ತಪಡಿಸಿದ್ದು, ಆರೋಪಿಗಳ ಕೂಡಲೇ ಬಂಧನಕ್ಕೊಳಪಡಿಸುವಂತೆ ಆಗ್ರಹಿಸಿದ್ದಾರೆ.

ಪ್ರಕರಣ ಸಂಬಂಧ ಪೊಲೀಸರು ಆರೋಪಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), 504 (ಯಾರನ್ನಾದರೂ ಪ್ರಚೋದಿಸಲು ಉದ್ದೇಶಪೂರ್ವಕ ಅವಮಾನ), 506 (2) (ಕ್ರಿಮಿನಲ್ ಬೆದರಿಕೆ) ಮತ್ತು 114 (ಅಪರಾಧ ನಡೆದಾಗ ಉಪಸ್ಥಿತರಿರುವವರು) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಅಲ್ಲದೆ. ವಾಂಕರ್ ಸಾವಿನ ಬಳಿಕವೂ ಐಪಿಸಿ ಸೆಕ್ಷನ್ 302 ಅಡಿಯಲ್ಲೂ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗಳ ಬಂಧನಕ್ಕೊಳಪಡಿಸಿದೇ ಹೋದಲ್ಲಿ ತೀವ್ರ ಪ್ರತಿಭಟನೆ ನಡೆಸಲಾಗುವುದು, ಆರೋಪಿಗಳ ಬಂಧನದ ಹೊರತು ಮೃತರ ಶವ ಸ್ವೀಕರಿಸುವುದಿಲ್ಲ ಎಂದು ಜಿಗ್ನೇಶ್ ಮೇವಾನಿ ಅವರು ತಿಳಿಸಿದ್ದಾರೆ.

SCROLL FOR NEXT