ದೇಶ

ಬಿಹಾರ: ನಿತೀಶ್ ಸರ್ಕಾರಕ್ಕೆ ಹಿನ್ನಡೆ, ಸಚಿವ ಸ್ಥಾನಕ್ಕೆ ಮಾಜಿ ಸಿಎಂ ಜೀತನ್ ರಾಮ್ ಮಾಂಝಿ ಪುತ್ರ ಡಾ.ಸಂತೋಷ್ ಸುಮನ್ ರಾಜೀನಾಮೆ

Srinivasamurthy VN

ಪಾಟ್ನಾ: ಪ್ರಮುಖ ರಾಜಕೀಯ ಬೆಳವಣಿಗೆಯಲ್ಲಿ ಬಿಹಾರದ ನಿತೀಶ್ ಕುಮಾರ್ ನೇತೃತ್ವದ ಮೈತ್ರಿ ಸರ್ಕಾರಕ್ಕೆ ಭಾರಿ ಹಿನ್ನಡೆಯಾಗಿದ್ದು, ಸಚಿವ ಸ್ಥಾನಕ್ಕೆ ಮಾಜಿ ಸಿಎಂ ಜೀತನ್ ರಾಮ್ ಮಾಂಝಿ ಪುತ್ರ ಡಾ.ಸಂತೋಷ್ ಸುಮನ್ ರಾಜೀನಾಮೆ ನೀಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಮತ್ತು ಹಿಂದೂಸ್ತಾನಿ ಅವಾಮ್ ಮೋರ್ಚಾದ ಸಂಸ್ಥಾಪಕ ಜಿತನ್ ರಾಮ್ ಮಾಂಝಿ ಅವರ ಪುತ್ರ. ಸಂತೋಷ್ ಸುಮನ್ ಅವರು ನಿತೀಶ್ ಸರ್ಕಾರದಲ್ಲಿ ಎಸ್‌ಸಿ ಎಸ್‌ಟಿ ಕಲ್ಯಾಣ ಇಲಾಖೆ ಸಚಿವರಾಗಿದ್ದರು. ವಿಜಯ್ ಚೌಧರಿ ಅವರಿಗೆ ಸಂತೋಷ್ ಕುಮಾರ್ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಮೂಲಗಳ ಪ್ರಕಾರ ರಾಜಕೀಯ ಆಂತರಿಕ ಕಲಹಗಳಿಂದ ಬೇಸತ್ತಿದ್ದ ಸುಮನ್ ಅವರು ಹಲವು ದಿನಗಳ ಹಿಂದೆಯೇ ಬಂಡಾಯದ ಬಾವುಟ ಹಾರಿಸಿದ್ದರು. ಸುಮನ್ ರೊಂದಿಗಿನ ಅಸಮಾಧಾನ ನಿಭಾಯಿಸಲು ನಿತೀಶ್ ಕುಮಾರ್ ಅವರೇ ವಿಜಯ್ ಚೌಧರಿ ಅವರನ್ನು ನೇಮಿಸಿದ್ದರು. ಆದರೆ ಇದಾವುದೂ ಫಲ ನೀಡಿಲ್ಲ. ಇಂದು ಜಿತನ್ ರಾಮ್ ಮಾಂಝಿ ಮತ್ತು ವಿಜಯ್ ಚೌಧರಿ ಭೇಟಿಯಾಗಿದ್ದಾರೆ. ಈ ವೇಳೆ ಸಂತೋಷ್ ಸುಮನ್ ಕೂಡ ಇದ್ದರು. ವಿಜಯ್ ಚೌಧರಿ ಅವರಿಗೆ ಸಂಪುಟಕ್ಕೆ ರಾಜೀನಾಮೆ ಸಲ್ಲಿಸಿದರು.

ಐದು ಸ್ಥಾನಗಳಿಗೆ ಬೇಡಿಕೆ ಇಟ್ಟಿದ್ದ ಸುಮನ್
ಕಳೆದ ಕೆಲವು ದಿನಗಳಿಂದ ಜಿತನ್ ರಾಮ್ ಮಾಂಝಿ ಅವರು ನಿತೀಶ್ ಕುಮಾರ್ ಮೇಲೆ ಒತ್ತಡದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. 2024ರ ಲೋಕಸಭೆ ಚುನಾವಣೆಯಲ್ಲಿ ತಮ್ಮ ಪಕ್ಷವು ಗೌರವಾನ್ವಿತ ಪಾಲು ಪಡೆಯದಿದ್ದರೆ, ಬಿಹಾರದ ಎಲ್ಲಾ 40 ಸ್ಥಾನಗಳಲ್ಲಿ ಸ್ಪರ್ಧಿಸಬಹುದು ಎಂದು ಅವರು ಸ್ಪಷ್ಟಪಡಿಸಿದ್ದರು.

ಈ ಹಿಂದೆ ಜಿತನ್ ಮಾಂಝಿ 5 ಸ್ಥಾನಗಳಿಗೆ ಬೇಡಿಕೆ ಇಟ್ಟಿದ್ದರು. ಆದರೆ ಈ ಬೇಡಿಕೆ ಈಡೇರದ ಕಾರಣ ಇದೀಗ ಅವರು ಮೈತ್ರಿ ಕಡಿದುಕೊಂಡಿದ್ದಾರೆ ಎಂದು ಹೇಳಲಾಗಿದೆ. 
 

SCROLL FOR NEXT