ದೇಶ

ರೈತರ ಪ್ರತಿಭಟನೆ ಹೈಲೆಟ್ ಮಾಡುವ ಟ್ವಿಟರ್ ಖಾತೆ ನಿರ್ಬಂಧಿಸಲಾಗುತ್ತದೆ ಎಂಬುದು ಮಕ್ಕಳಿಗೂ ತಿಳಿದಿತ್ತು: ರಾಕೇಶ್ ಟಿಕಾಯತ್

Nagaraja AB

ಕುರುಕ್ಷೇತ್ರ: ಈಗ ರದ್ದಾಗಿರುವ ಕೃಷಿ ಕಾನೂನುಗಳ ವಿರುದ್ಧ ರೈತರು ನಡೆಸುತ್ತಿದ್ದ ಪ್ರತಿಭಟನೆಯನ್ನು ಹೈಲೆಟ್ ಮಾಡಿದ ಅನೇಕ ಟ್ವಿಟರ್ ಖಾತೆಗಳನ್ನು ನಿರ್ಬಂಧಿಸಲಾಗಿದೆ ಎಂದು ರೈತ ನಾಯಕ ರಾಕೇಶ್ ಟಿಕಾಯತ್ ಮಂಗಳವಾರ ಆರೋಪಿಸಿದ್ದಾರೆ. 

ರೈತರ ಪ್ರತಿಭಟನೆಯನ್ನು ವರದಿ ಮಾಡುವ ಹಾಗೂ ಸರ್ಕಾರವನ್ನು ಟೀಕೆ ಮಾಡುವ ಖಾತೆಗಳನ್ನು ತಡೆಹಿಡಿಯಬೇಕು ಎಂದು ಭಾರತ ಸರ್ಕಾರದಿಂದ ಹಲವು ಮನವಿಗಳು ಬಂದಿದ್ದವು. ಅಲ್ಲದೇ ಭಾರತದಲ್ಲಿ ಟ್ವಿಟರ್ ನ್ನು ಬಂದ್ ಮಾಡುವುದಾಗಿ ಬೆದರಿಕೆ ಹಾಕಲಾಗಿತ್ತು ಎಂದು ಟ್ವಿಟರ್ ನ ಸಹ ಸಂಸ್ಥಾಪಕ ಹಾಗೂ ಮಾಜಿ ಸಿಇಒ ಜಾಕ್ ಡೋರ್ಸಿ ಹೇಳಿಕೆ ನಂತರ ಟಿಕಾಯತ್ ಈ ರೀತಿಯ ಮಾತುಗಳನ್ನಾಡಿದ್ದಾರೆ.

ಕೃಷಿ ಕಾನೂನುಗಳ ವಿರುದ್ಧದ ಆಂದೋಲನದ ನೇತೃತ್ವ ವಹಿಸಿದ್ದ ಪ್ರಮುಖ ರೈತ ಮುಖಂಡರಲ್ಲಿ ಒಬ್ಬರಾದ ಭಾರತೀಯ ಕಿಸಾನ್ ಯೂನಿಯನ್ ಮುಖಂಡ ಟಿಕಾಯತ್, ಟ್ವಿಟರ್‌ ಮೇಲೆ ಸರ್ಕಾರದ ಒತ್ತಡವಿತ್ತು ಎಂದು ಆರೋಪಿಸಿದರು. ಅಲ್ಲದೇ ರೈತರ ಪ್ರತಿಭಟನೆ ಹೈಲೆಟ್ ಮಾಡುವ ಟ್ವಿಟರ್ ಖಾತೆಗಳನ್ನು ಬಂದ್ ಮಾಡುವಂತೆ ಮನವಿ ಮಾಡಲಾಗಿತ್ತು, ಪ್ರತಿಭಟನೆಯನ್ನು ಹೆಚ್ಚಾಗಿ ತೋರಿಸದಂತೆಯೂ ಸರ್ಕಾರದಿಂದ ಮನವಿ ಮಾಡಲಾಗಿತ್ತು ಎಂದು ಹೇಳಿದರು. 

ಪ್ರತಿಭಟನೆ ಹತ್ತಿಕ್ಕುವ ನಿಟ್ಟಿನಲ್ಲಿ ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸುವ ಟ್ವೀಟ್ ಗಳನ್ನು ಕಡಿಮೆಗೊಳಿಸುವಂತೆ ಸರ್ಕಾರದ ಕಡೆಯಿಂದ ಒತ್ತಡವಿತ್ತು. ರೈತರ ಪ್ರತಿಭಟನೆ ಗಮನ ಸೆಳೆಯುವ ಅನೇಕ ಟ್ವೀಟ್ ಗಳನ್ನು ನಿರ್ಬಂಧಿಸಲಾಗಿದೆ. ಈ ವಿಚಾರ ಮಕ್ಕಳಿಗೂ ತಿಳಿದಿತ್ತು. ಇಂತಹ ಅನೇಕ ಟ್ವೀಟರ್ ಖಾತೆಗಳನ್ನು ಇಂದಿಗೂ ಬಂದ್ ಮಾಡಲಾಗಿದೆ ಎಂದು ಟಿಕಾಯತ್ ಹೇಳಿದರು. 

SCROLL FOR NEXT