ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ನಿರ್ಮಾಣ ಹಂತದ ಮೇಲ್ಸೇತುವೆ ಕುಸಿದ ಪರಿಣಾಮ ಕ್ರೇನ್ ಆಪರೇಟರ್ ಸಾವನ್ನಪ್ಪಿರುವ ಘಟನೆ ಇಂದು ವರದಿಯಾಗಿದೆ.
ನೈಋತ್ಯ ದೆಹಲಿಯ ರಾಷ್ಟ್ರೀಯ ಹೆದ್ದಾರಿ-48ರ ಬಳಿ ನಿರ್ಮಾಣ ಹಂತದಲ್ಲಿದ್ದ ಮೇಲ್ಸೇತುವೆಯ ಒಂದು ಭಾಗ ಕುಸಿದು ಬಿದ್ದು ಕ್ರೇನ್ ನಿರ್ವಾಹಕರೊಬ್ಬರು ಬುಧವಾರ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ವಿಡಿಯೋ: ಬಿಹಾರದಲ್ಲಿ 1,700 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದ ಸೇತುವೆ ಕುಸಿತ, ತನಿಖೆಗೆ ಆದೇಶ!
ಸಮಲ್ಖಾ ಬಳಿಯ ಮೇಲ್ಸೇತುವೆಯ ಒಂದು ಭಾಗ ಕುಸಿದು ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕ್ರೇನ್ ಆಪರೇಟರ್ ತೀವ್ರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ (ನೈಋತ್ಯ) ಮನೋಜ್ ಸಿ ಹೇಳಿದ್ದಾರೆ.
ತಿಂಗಳಲ್ಲಿ 2ನೇ ದುರಂತ
ಕಳೆದ ತಿಂಗಳು, ಪೂರ್ವ ದೆಹಲಿಯ ಬಾರಾಪುಲ್ಲಾ-ನೋಯ್ಡಾ ಲಿಂಕ್ ರೋಡ್ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿರುವ ಮೇಲ್ಸೇತುವೆಯಿಂದ ಕಾಮಗಾರಿ ಕಾರು ಬಿದ್ದು 42 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದರು. ಮೇ 26 ರಂದು ರಾತ್ರಿ 8:30 ರ ಸುಮಾರಿಗೆ ಈ ಮಾರಣಾಂತಿಕ ಅಪಘಾತ ಸಂಭವಿಸಿತ್ತು. ಆ ಸಮಯದಲ್ಲಿ ನೋಯ್ಡಾದಲ್ಲಿ ಕೆಲಸದಿಂದ ದೆಹಲಿಯ ಕೃಷ್ಣ ನಗರಕ್ಕೆ ವ್ಯಕ್ತಿ ಮನೆಗೆ ಮರಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.