ದೇಶ

ಶಾಲಾ ಪುಸ್ತಕಗಳಿಂದ ಸಾವರ್ಕರ್, ಹೆಡ್ಗೆವಾರ್ ಅವರ ಅಧ್ಯಾಯ ತೆಗೆದು ಹಾಕಿರುವುದು ದುರದೃಷ್ಟಕರ: ನಿತಿನ್ ಗಡ್ಕರಿ, ಕಾಂಗ್ರೆಸ್ ತಿರುಗೇಟು

Srinivasamurthy VN

ನವದೆಹಲಿ: ಕರ್ನಾಟಕ ಸರ್ಕಾರ ಶಾಲಾ ಪುಸ್ತಕಗಳಿಂದ ಸಾವರ್ಕರ್, ಹೆಡ್ಗೆವಾರ್ ಅವರ ಅಧ್ಯಾಯ ತೆಗೆದು ಹಾಕಿರುವುದು ದುರದೃಷ್ಟಕರ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಶನಿವಾರ ನಡೆದ ವಿಡಿ ಸಾವರ್ಕರ್ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ ಶಾಲಾ ಪಠ್ಯಪುಸ್ತಕಗಳನ್ನು ಪರಿಷ್ಕರಿಸುವ ಕರ್ನಾಟಕ ಸರ್ಕಾರದ ಪ್ರಸ್ತಾವನೆಯನ್ನು ಟೀಕಿಸಿದರು. ಅಲ್ಲದೇ ಇದಕ್ಕಿಂತ ನೋವಿನ ಸಂಗತಿ ಇನ್ನೊಂದಿಲ್ಲ ಎಂದ ಅವರು, ಸಾವರ್ಕರ್, ಹೆಡ್ಗೆವಾರ್ ಅವರಂಹ ದೇಶಪ್ರೇಮಿಗಳ ಅಧ್ಯಾಯ ತೆಗೆದು ಹಾಕಿರುವುದು ದುರದೃಷ್ಟಕರ ಎಂದು ಗಡ್ಕರಿ ಹೇಳಿದ್ದಾರೆ.

ಕಾಂಗ್ರೆಸ್ ತಿರುಗೇಟು
ಗಡ್ಕರಿ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್ ಆರ್ ಎಸ್ ಎಸ್ ನಾಯಕ ಓಲೈಸಲು ಗಡ್ಕರಿ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಹೇಳಿದೆ. ಈ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ಮುಖಂಡ ಗೌರವ್ ವಲ್ಲಭ್ ಅವರು, ಕೆ.ಬಿ.ಹೆಡಗೇವಾರ್ ಮತ್ತು ವೀರ್ ಸಾವರ್ಕರ್ ಅವರ ವಿಚಾರಧಾರೆಗಳ ಬಗ್ಗೆ ಅಧ್ಯಯನ ಮಾಡುವುದಕ್ಕಿಂತ... ಭಾರತ ಮತ್ತು ಕರ್ನಾಟಕದ ವಿದ್ಯಾರ್ಥಿಗಳು (ಬಿಆರ್) ಅಂಬೇಡ್ಕರ್, ಜವಾಹರಲಾಲ್ ನೆಹರು ಮತ್ತು ಮಹಾತ್ಮ ಗಾಂಧಿಯವರ ವಿಚಾರಧಾರೆಗಳ ಬಗ್ಗೆ ಅಧ್ಯಯನ ಮಾಡಬೇಕು ಎಂದು ನಾವು ನಂಬುತ್ತೇವೆ ಎಂದು ಹೇಳಿದ್ದಾರೆ.

ಕರ್ನಾಟಕ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಶಾಲಾ ಪಠ್ಯಕ್ರಮದಿಂದ ಆರ್‌ಎಸ್‌ಎಸ್ ಸಂಸ್ಥಾಪಕ ಹೆಡ್ಗೆವಾರ್ ಮತ್ತು ವಿಡಿ ಸಾವರ್ಕರ್ ಅವರ ಪಠ್ಯಗಳನ್ನು ಕೈಬಿಡುವುದಾಗಿ ಜೂನ್ 15ರಂದು ಘೋಷಣೆ ಮಾಡಿದ್ದರು. ಕೆಬಿ ಹೆಡ್ಗೆವಾರ್ ಅವರ ಪಠ್ಯಕ್ರಮವನ್ನು ಕೈಬಿಡಲಾಗಿದೆ. ಕಳೆದ ವರ್ಷ ಬಿಜೆಪಿ (BJP) ಸರ್ಕಾರ ಏನೇ ಬದಲಾವಣೆಗಳನ್ನು ತಂದಿದ್ದರೂ ಸಹಿತ ನಾವು ಅದನ್ನು ಬದಲಾಯಿಸಿ ಮರುಪರಿಚಯಿಸಿದ್ದೇವೆ. ಎಲ್ಲಾ ವಿವರಗಳು ಶೀಘ್ರವೇ ಲಭ್ಯವಾಗಲಿದೆ ಎಂದರು. 
 

SCROLL FOR NEXT