ದೇಶ

ರೈಲು ನಿರ್ವಹಣೆ ಮಾಡಲಾಗದವರು, ದೇಶವನ್ನು ಹೇಗೆ ಮುನ್ನಡೆಸುತ್ತಾರೆ: ಬಿಜೆಪಿ ವಿರುದ್ಧ ಕೇಜ್ರಿವಾಲ್ ವಾಗ್ದಾಳಿ

Ramyashree GN

ನವದೆಹಲಿ: ಭಾರತೀಯ ರೈಲ್ವೆ ಅಧೀನದಲ್ಲಿರುವ ರೈಲುಗಳ ಎಸಿ ಮತ್ತು ಸ್ಲೀಪರ್ ಕೋಚ್‌ಗಳು ಸಾಮಾನ್ಯಕ್ಕಿಂತ ಕೆಟ್ಟದಾಗಿದೆ ಎಂದು ಆರೋಪಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾನುವಾರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ರೈಲ್ವೆ ವ್ಯವಸ್ಥೆಯನ್ನು ನಡೆಸಲು ಸಾಧ್ಯವಾಗದಿದ್ದರೆ, ಕೇಸರಿ ಪಕ್ಷವು ದೇಶವನ್ನು ಹೇಗೆ ಮುನ್ನಡೆಸುತ್ತದೆ ಎಂದು ಪ್ರಶ್ನಿಸಿದ್ದಾರೆ.

ಕೇಜ್ರಿವಾಲ್ ಅವರ ಟ್ವೀಟ್‌ಗೆ ವ್ಯಂಗ್ಯವಾಗಿ ಉತ್ತರಿಸಿದ ಬಿಜೆಪಿ, ದೆಹಲಿ ಸಾರಿಗೆ ನಿಗಮದ ಬಸ್‌ಗಳ ಸ್ಥಿತಿಯ ಕುರಿತು ಕೇಜ್ರಿವಾಲ್ ವಿರುದ್ಧವೇ ವಾಗ್ದಾಳಿ ನಡೆಸಿದೆ.

'ಹವಾನಿಯಂತ್ರಿತ ಮತ್ತು ಸ್ಲೀಪರ್ ಕೋಚ್‌ಗಳು ರಿಸರ್ವೇಶನ್ ಮಾಡಿರದ ಜನರಿಂದ ತುಂಬಿ ತುಳುಕುತ್ತಿವೆ ಎಂದು ಜನರು ದೂರಿದ್ದಾರೆ. ಅವರು ಉತ್ತಮವಾಗಿ ಚಾಲನೆಯಲ್ಲಿದ್ದ ರೈಲ್ವೆಗಳನ್ನು ನಾಶಪಡಿಸಿದರು. ಇಂದು ಎಸಿ ಕೋಚ್ ರಿಸರ್ವೇಶನ್ ಮಾಡಿದರೂ ಕುಳಿತುಕೊಳ್ಳಲು, ಮಲಗಲು ಸೀಟು ಸಿಗುತ್ತಿಲ್ಲ. ಎಸಿ ಮತ್ತು ಸ್ಲೀಪರ್ ಕೋಚ್‌ಗಳು ಸಾಮಾನ್ಯಕ್ಕಿಂತ ಕೆಟ್ಟದಾಗಿದೆ. ಅವರಿಗೆ ಸರ್ಕಾರವನ್ನು ಹೇಗೆ ನಡೆಸಬೇಕೆಂದು ತಿಳಿದಿಲ್ಲ. ಅವರಿಗೆ ಅರ್ಥವಾಗುವುದೇ ಇಲ್ಲ. ಅನಕ್ಷರಸ್ಥ ಸರ್ಕಾರ. ಅವರು ಪ್ರತಿಯೊಂದು ಕ್ಷೇತ್ರವನ್ನು ಹಾಳು ಮಾಡುತ್ತಿದ್ದಾರೆ' ಎಂದು ಕೇಜ್ರಿವಾಲ್ ಸರಣಿ ಟ್ವೀಟ್ ಮಾಡಿದ್ದಾರೆ.

'ರೈಲುಗಳನ್ನು ನಿರ್ವಹಿಸಲು ಸಾಧ್ಯವಾಗದವರು, ದೇಶವನ್ನು ಹೇಗೆ ಮುನ್ನಡೆಸುತ್ತಾರೆ?' ಎಂದಿರುವ ಕೇಜ್ರಿವಾಲ್ ಅವರ ಟ್ವೀಟ್ ಅನ್ನು ಉಲ್ಲೇಖಿಸಿರುವ ದೆಹಲಿ ಬಿಜೆಪಿಯು, 'ಡಿಟಿಸಿ ಬಸ್‌ಗಳಿಗೆ ಬೆಂಕಿ ಹಚ್ಚಿದ ದೃಶ್ಯಗಳನ್ನು 'ಫಸ್ಟ್ ಹ್ಯಾಂಡಲ್ ಡಿಟಿಸಿ ಕೇಜ್ರಿವಾಲ್' ಶೀರ್ಷಿಕೆಯೊಂದಿಗೆ ಹಂಚಿಕೊಂಡಿದೆ.

'ಡಿಟಿಸಿ ನಡೆಸಲಾಗದವರು, ದೆಹಲಿಯನ್ನು ಹೇಗೆ ನಡೆಸುತ್ತಾರೆ? ಕುತಂತ್ರ ವ್ಯಕ್ತಿಯು ದೆಹಲಿಯ ಸಾರಿಗೆ ವ್ಯವಸ್ಥೆಯನ್ನು ನಾಶಪಡಿಸಿದ್ದಾರೆ. ಅರ್ಧಕ್ಕಿಂತ ಹೆಚ್ಚು ಬಸ್ಸುಗಳು ಹಳೆಯದಾಗಿದ್ದರೂ, ಹೊಸ ಬಸ್ ತರಲು ಸಾಧ್ಯವಾಗಲಿಲ್ಲ. ಅವರು ಸರಿಯಾಗಿ ತಿಳಿದುಕೊಂಡಿಲ್ಲ' ಎಂದು ಅದು ಹೇಳಿದೆ.

SCROLL FOR NEXT