ದೇಶ

ಪ್ರಧಾನಿ ಮೋದಿ ಅಮೆರಿಕಾ ಪ್ರವಾಸದ ವೇಳೆ ಪಾಕ್ ಪಿತೂರಿ: ಐಎಸ್ಐ, ಪೋಸ್ಟರ್ ಗಳ ಪ್ರದರ್ಶಿಸಿ ಅವಮಾನಿಸಲು ಸಂಚು!

Manjula VN

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇದೇ ವಾರಾಂತ್ಯಕ್ಕೆ ವಿಶ್ವದ ದೊಡ್ಡಣ್ಣ ಅಮೋರಿಕಾ ರಾಷ್ಟ್ರಕ್ಕೆ ಭೇಟಿ ನೀಡುತ್ತಿದ್ದು, ಭೇಟಿ ವೇಳೆ ಮೋದಿಯವರಿಗೆ ಅವಮಾನಿಸಲು ಪಾಕಿಸ್ತಾನ ಸಂಚು ರೂಪಿಸುತ್ತಿದೆ ಎಂಬ ಮಾಹಿತಿ ಇದೀಗ ಬಹಿರಂಗಗೊಂಡಿದೆ.

ಮೋದಿ ಭೇಟಿ ಹಿನ್ನೆಲೆಯಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಅಮೆರಿಕಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವಾರು ಖಲಿಸ್ತಾನ್ ಪರ ಸಂಘಟನೆಗಳು ಮತ್ತು ಹಲವಾರು ಗುಂಪುಗಳೊಂದಿಗೆ ಭಾರತದ ವಿರುದ್ಧ ತಂತ್ರ ಹೆಣೆಯಲು ಗೌಪ್ಯ ಸಭೆಗಳನ್ನು ಮಾಡಿದೆ ಎಂಬ ವರದಿ ಬಹಿರಂಗಗೊಂಡಿದೆ.

ಮೂಲಗಳ ಪ್ರಕಾರ, ಪ್ರಧಾನಮಂತ್ರಿ ಮೋದಿ ಅವರ ಅಮೆರಿಕ ಭೇಟಿಯನ್ನು ವಿರೋಧಿಸಲು ಪಾಕಿಸ್ತಾನದ ಐಎಸ್‌ಐ ಕಳೆದ ಹಲವು ದಿನಗಳಿಂದ ಅಮೆರಿಕದಲ್ಲಿ ಸಕ್ರಿಯವಾಗಿದೆ ಎಂದು ತಿಳಿದುಬಂದಿದೆ.

ಇದರಂತೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಕೆಲವು ಗುಂಪುಗಳೊಂದಿಗೆ ನಿರಂತರ ಸಂಪರ್ಕ ಸಾಧಿಸುವ ಜೊತೆಗೆ ಮೇಲಿಂದ ಮೇಲೆ ಸಭೆ ನಡೆಸುತ್ತಿದೆ ಎನ್ನಲಾಗುತ್ತಿದೆ. ಈ ಮೂಲಕ ಭಾರತದ ವಿರುದ್ಧದ ಪಿತೂರಿ ನಡೆಸಲು ಒಂದಷ್ಟು ಗುಂಪು/ಸಂಸ್ಥೆಗಳಿಗೆ ಹಣ ಕೂಡ ನೀಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಭಾರತದ ಪ್ರಧಾನಿ ಮೋದಿ ಅವರ ಜೊತೆಗೆ ಅಮೆರಿಕಾ ದೇಶದ ಅಧ್ಯಕ್ಷರು ಯಾವ ವಿಚಾರ ಚರ್ಚಿಸಲಿದ್ದಾರೆ. ಭೇಟಿ ವೇಳೆ ಏನೆಲ್ಲ ಕಾರ್ಯಕ್ರಮ ನಡೆಯಲಿವೆ. ಜೊತೆಗೆ ಯುಸ್ ಮೋದಿ ಸ್ವಾಗತಿಸಲು ಯಾವ ರೀತಿಯ ಸಿದ್ಧತೆ ಮಾಡಿಕೊಂಡಿದೆ ಎಂಬ ಅಂಶಗಳ ಬಗ್ಗೆ ವಿರೋಧಿ ಪಾಕಿಸ್ತಾನ ಸಾಕಷ್ಟು ಚಿಂತೆ ಮಾಡುತ್ತಿದೆ. ಎರಡು ದೇಶಗಳ ಚಲನವನಗಳ ಮೇಲೆ ನಿಗಾ ಇಡುತ್ತಿದೆ ಎಂದು ವರದಿಗಳು ತಿಳಿಸಿವೆ.

ಅಮೆರಿಕಾ ಭೇಟಿ ವೇಳೆ ಮೋದಿಯನ್ನು ವಿರೋಧಿಸಲು ಪಾಕಿಸ್ತಾನದ ಐಎಸ್ಐ ಈಗಾಗಲೇ ಟೂಲ್ ಕಿಟ್ ಒಂದನ್ನು ಸಿದ್ಧಪಡಿಸಿದ್ದು, ಈ ಟೂಲ್ ಕಿಟ್‌ನಲ್ಲಿ, ಭಾರತವನ್ನು ಯಾವ ರೀತಿಯಲ್ಲಿ ವಿರೋಧಿಸಬೇಕು ಮತ್ತು ಯಾವ ಸ್ಥಳಗಳಲ್ಲಿ ಪ್ರತಿಭಟಿಸಬೇಕು ಎಂಬುದರ ಕುರಿತು ಯೋಜನೆ ರೂಪಿಸಲಾಗಿದೆ ಎಂದು ತಿಳಿದುಬಂದಿದೆ.

ಅಷ್ಟೇ ಅಲ್ಲ, ಪ್ರತಿಭಟನೆ ವೇಳೆ ಯಾವ ಪೋಸ್ಟರ್‌ಗಳನ್ನು ಬಳಸಬೇಕು ಎಂಬುದಕ್ಕೂ ಸಿದ್ಧತೆ ನಡೆಸಲಾಗಿದ್ದು,. ಪ್ರತಿಭಟನೆಯ ಜವಾಬ್ದಾರಿ ನೀಡಿದವರನ್ನು ಪ್ರತಿಭಟನಾ ಸ್ಥಳಕ್ಕೆ ಕರೆದೊಯ್ಯಲು ಬಸ್ ವ್ಯವಸ್ಥೆ ಕೂಡ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಭಾರತದ ವಿರುದ್ಧ ಷಡ್ಯಂತ್ರ ನಡೆಸಲು ವಿಶೇಷ ವೆಬ್‌ಸೈಟ್ ಕೂಡ ರಚಿಸಲಾಗಿದೆ ಎಂದು ಹೇಳಲಾಗುತ್ತಿದ್ದು, ಈ ವೆಬ್‌ಸೈಟ್‌ನಲ್ಲಿ, ಭಾರತದ ವಿರುದ್ಧದ ಷಡ್ಯಂತ್ರವನ್ನು ನಡೆಸಲು ಎಲ್ಲಾ ಜನರು ತಮ್ಮನ್ನು ತಾವು ನೋಂದಾಯಿಸಿಕೊಳ್ಳುವಂತೆ ತಿಳಿಸಲಾಗಿದೆ ಎಂದು ತಿಳಿದುಬಂದಿದೆ.

SCROLL FOR NEXT