ದೇಶ

ಛತ್ತೀಸ್‌ಗಢ ತಲುಪಿದ ಅಮಿತ್ ಶಾ; 'ಆದಿಪುರುಷ' ಸಿನಿಮಾ ನಿಷೇಧಿಸುವಂತೆ ಸಿಎಂ ಭೂಪೇಶ್ ಬಘೇಲಾ ಮನವಿ

Ramyashree GN

ರಾಯಪುರ: ರಾಮಾಯಣ ಮಹಾಕಾವ್ಯವನ್ನು ಆಧರಿಸಿದ ಆದಿಪುರುಷ ಸಿನಿಮಾದಲ್ಲಿನ ಕೆಲವು ಪಾತ್ರಗಳ ಸಂಭಾಷಣೆ, ಭಾಷೆ ಮತ್ತು ಕೆಲವು ಪಾತ್ರಗಳನ್ನು ತೋರಿಸಿರುವ ರೀತಿಗಾಗಿ ತೀವ್ರ ವಿರೋಧ ಎದುರಿಸುತ್ತಿರುವ ಚಲನಚಿತ್ರವನ್ನು ನಿಷೇಧಿಸುವಂತೆ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲಾ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಗುರುವಾರ ಮನವಿ ಮಾಡಿದ್ದಾರೆ.

ಹಿರಿಯ ಬಿಜೆಪಿ ನಾಯಕ ಶಾ ಅವರು ಮಧ್ಯಾಹ್ನ ರಾಜ್ಯದ ರಾಜಧಾನಿ ರಾಯಪುರವನ್ನು ತಲುಪಿದರು ಮತ್ತು ನಂತರ ನೆರೆಯ ದುರ್ಗ್ ನಗರದಲ್ಲಿ ಸಾರ್ವಜನಿಕ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಮುಖ್ಯಮಂತ್ರಿ ಬಘೇಲಾ ಟ್ವೀಟ್ ಮಾಡಿದ್ದು, 'ಶ್ರೀರಾಮನ ಎಲ್ಲಾ ಭಕ್ತರು ಮತ್ತು ರಾಜ್ಯದ ಜನರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭಗವಾನ್ ರಾಮನ ನಾನಿಹಾಲ್‌ಗೆ (ತಾಯಿಯ ಮನೆ) ಸ್ವಾಗತಿಸುತ್ತಾರೆ. ಅದೇ ಸಮಯದಲ್ಲಿ ರಾಮಾಯಣ ಮತ್ತು ದೇವರಿಗೆ ಕಳಂಕ ತರುತ್ತಿರುವ ಆದಿಪುರುಷ ಚಿತ್ರವನ್ನು ಇಂದೇ ನಿಷೇಧಿಸಬೇಕೆಂದು ವಿನಮ್ರವಾಗಿ ವಿನಂತಿಸುತ್ತೇನೆ'. ಜೈ ಶ್ರೀರಾಮ್' ಎಂದಿದ್ದಾರೆ.

'ಆದಿಪುರುಷ' ಸಿನಿಮಾದಲ್ಲಿ ಭಗವಾನ್ ರಾಮ ಮತ್ತು ಭಗವಾನ್ ಹನುಮಾನ್ ಅವರ ವರ್ಚಸ್ಸಿಗೆ ಕಳಂಕ ತರುವ ಪ್ರಯತ್ನವನ್ನು ಮಾಡಲಾಗಿದೆ ಮತ್ತು ಜನರು ಒತ್ತಾಯಿಸಿದರೆ ಛತ್ತೀಸ್‌ಗಢ ಕಾಂಗ್ರೆಸ್ ಸರ್ಕಾರವು ರಾಜ್ಯದಲ್ಲಿ ಅದನ್ನು ನಿಷೇಧಿಸುವ ಬಗ್ಗೆ ಯೋಚಿಸಬಹುದು' ಎಂದು ಈ ಹಿಂದೆ ಬಘೇಲಾ ಅವರು ಹೇಳಿದ್ದರು.

ಚಿತ್ರದಲ್ಲಿನ ಕೆಲವು ಸಂಭಾಷಣೆಗಳು 'ಆಕ್ಷೇಪಾರ್ಹ ಮತ್ತು ಅಸಭ್ಯ' ಎಂದು ಆರೋಪಿಸಿದ ಅವರು, ತಮ್ಮನ್ನು ತಾವು ಧರ್ಮದ ಪಾಲಕರು ಎಂದು ಕರೆದುಕೊಳ್ಳುವ ರಾಜಕೀಯ ಪಕ್ಷಗಳ 'ಮೌನ'ವನ್ನು ಪ್ರಶ್ನಿಸಿದರು.

ರಾಮಾಯಣ ಮಹಾಕಾವ್ಯವನ್ನು ಆಧರಿಸಿದ ನಟ ಪ್ರಭಾಸ್ ಅಭಿನಯದ ಆದಿಪುರುಷ ಸಿನಿಮಾ ಕಳೆದ ಶುಕ್ರವಾರ ಬಿಡುಗಡೆಯಾಗಿದೆ.

SCROLL FOR NEXT