ನವದೆಹಲಿ: ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ಸುಮಾರು 50 ದಿನಗಳ ನಂತರ, ಕೇಂದ್ರ ಗೃಹ ಸಚಿವ ಅಮಿತ್ ಶಾ ಜೂನ್ 24 ರಂದು ರಾಜ್ಯದ ಪರಿಸ್ಥಿತಿ ಕುರಿತು ಚರ್ಚಿಸಲು ಸರ್ವಪಕ್ಷ ಸಭೆಯನ್ನು ಕರೆದಿದ್ದಾರೆ.
ಮಧ್ಯಾಹ್ನ 3 ಗಂಟೆಗೆ ದೆಹಲಿಯಲ್ಲಿ ಸಭೆ ನಡೆಯಲಿದೆ ಎಂದು ಕೇಂದ್ರ ಗೃಹ ಸಚಿವಾಲಯ ಬುಧವಾರ ಟ್ವೀಟ್ ಮಾಡಿದೆ. ಈಶಾನ್ಯ ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರದಲ್ಲಿ 100 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ ಮತ್ತು 50,000 ಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅವರು ಬುಧವಾರ ತಡರಾತ್ರಿ ಅಮಿತ್ ಶಾ ಅವರನ್ನು ಭೇಟಿಯಾದ ನಂತರ ಸರ್ವಪಕ್ಷ ಸಭೆಯನ್ನು ಘೋಷಿಸಲಾಯಿತು.
ಗೃಹ ಸಚಿವರು ಮೇ 29 ರಿಂದ ಜೂನ್ 1 ರವರೆಗೆ ಮಣಿಪುರಕ್ಕೆ ಭೇಟಿ ನೀಡಿದ್ದರು ಮತ್ತು ಕುಕಿ ಮತ್ತು ಮೈತೆಯ್ ಪ್ರತಿನಿಧಿಗಳನ್ನು ಭೇಟಿ ಮಾಡಿದ್ದರು. ಶಾಂತಿ ಸ್ಥಾಪನೆಗಾಗಿ ಮನವಿ ಮಾಡಿದರೂ, ರಾಜ್ಯದಲ್ಲಿ ಹಿಂಸಾಚಾರ ಮುಂದುವರಿದಾಗ ಎರಡು ಗುಂಪುಗಳೊಂದಿಗೆ ಮಾತುಕತೆ ನಡೆಸುವಂತೆ ಶಾ ಅವರು ಮುಖ್ಯಮಂತ್ರಿಗೆ ತಿಳಿಸಿದರು.
ಮಣಿಪುರದ ಹಲವಾರು ಶಾಸಕರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವ ನಿರೀಕ್ಷೆಯಲ್ಲಿ ದೆಹಲಿಯಲ್ಲಿ ಮೊಕ್ಕಾಂ ಹೂಡಿದ್ದಾರೆ. ಮೋದಿ ಅವರು ಜೂನ್ 21-26 ರವರೆಗೆ ಅಮೆರಿಕ ಮತ್ತು ಈಜಿಪ್ಟ್ ಭೇಟಿಯಲ್ಲಿದ್ದಾರೆ. ಮೈಟೈ ಶಾಸಕರನ್ನು ಒಳಗೊಂಡ ನಿಯೋಗವು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಮಣಿಪುರದ ಬಿಜೆಪಿ ಉಸ್ತುವಾರಿ ಸಂಬಿತ್ ಪಾತ್ರ ಅವರನ್ನು ಭೇಟಿ ಮಾಡಿತು.
ಸ್ಫೋಟದಲ್ಲಿ ಮೂವರಿಗೆ ಗಾಯ
ಬುಧವಾರ ಸಂಜೆ ಬಿಷ್ಣುಪುರ ಜಿಲ್ಲೆಯ ಮೊಯಿರಾಂಗ್ ಬಳಿ ಕಾರ್ ಬಾಂಬ್ ಸ್ಫೋಟಗೊಂಡಿದ್ದು, ಇಬ್ಬರು ಅಪ್ರಾಪ್ತರು ಸೇರಿದಂತೆ ಮೂವರು ಗಾಯಗೊಂಡಿದ್ದಾರೆ. ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈಮಧ್ಯೆ, ಹಿಂಸಾಚಾರದಿಂದ ನಿರಾಶ್ರಿತರಾದ 11,785 ಜನರಿಗೆ ಪರಿಹಾರ ನೀಡಲು ಮಿಜೋರಾಂ ಸರ್ಕಾರವು ಕೇಂದ್ರದಿಂದ ₹ 10 ಕೋಟಿ ರೂ. ಕೇಳಿದೆ. ಮಿಜೋರಾಂ ಮುಖ್ಯಮಂತ್ರಿ ಝೋರಾಮ್‌ತಂಗ ಅವರು ಮೇ 16 ಮತ್ತು ಮೇ 23 ರಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಣ ಕೋರಿ ಪತ್ರ ಬರೆದಿದ್ದಾರೆ ಎಂದು ಸರ್ಕಾರದ ವಕ್ತಾರರು ತಿಳಿಸಿದ್ದಾರೆ.