ದೇಶ

ಮಣಿಪುರ ಹಿಂಸಾಚಾರ: ಸಚಿವರ ಗೋಡೌನ್ ಸುಟ್ಟು ಹಾಕಿದ ದುಷ್ಕರ್ಮಿಗಳು; ನಿವಾಸ ಧ್ವಂಸಕ್ಕೂ ಯತ್ನ

Sumana Upadhyaya

ಇಂಫಾಲ್(ಮಣಿಪುರ): ಇಂಫಾಲ್ ಪೂರ್ವ ಜಿಲ್ಲೆಯ ಚಿಂಗಾರೆಲ್‌ನಲ್ಲಿ ಮಣಿಪುರ ಸಚಿವ ಎಲ್ ಸುಸಿಂದ್ರೋ ಅವರ ಖಾಸಗಿ ಗೋಡೌನ್‌ಗೆ ದುಷ್ಕರ್ಮಿಗಳ ಗುಂಪೊಂದು ಇಂದು ಶನಿವಾರ ಮುಂಜಾನೆ ಬೆಂಕಿ ಹಚ್ಚಿ ಧ್ವಂಸ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿನ್ನೆ ಶುಕ್ರವಾರ ರಾತ್ರಿ ಅದೇ ಜಿಲ್ಲೆಯ ಖುರೈನಲ್ಲಿರುವ ಗ್ರಾಹಕ ಮತ್ತು ಆಹಾರ ವ್ಯವಹಾರಗಳ ಸಚಿವರಾಗಿರುವ ಸುಸಿಂದ್ರೊ ಅವರ ಮತ್ತೊಂದು ಆಸ್ತಿ ಮತ್ತು ಅವರ ನಿವಾಸಕ್ಕೆ ಬೆಂಕಿ ಹಚ್ಚಲು ಪ್ರಯತ್ನಿಸಲಾಯಿತಾದರೂ ಅವರ ಕುತಂತ್ರ ಯಶಸ್ವಿಯಾಗಿರಲಿಲ್ಲ. 

ಸಚಿವರ ಖುರೈ ನಿವಾಸವನ್ನು ಘೇರಾವ್ ಮಾಡುವುದನ್ನು ತಡೆಯಲು ಭದ್ರತಾ ಪಡೆಗಳು ಮಧ್ಯರಾತ್ರಿಯವರೆಗೆ ಹಲವಾರು ಸುತ್ತಿನ ಅಶ್ರುವಾಯು ಸಿಡಿಮದ್ದುಗಳನ್ನು ಹಾರಿಸಿದವು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇಂಫಾಲ್ ಪಶ್ಚಿಮ ಜಿಲ್ಲೆಯ ಲ್ಯಾಂಫೆಲ್ ಪ್ರದೇಶದಲ್ಲಿ ಸಚಿವೆ ನೆಮ್ಚಾ ಕಿಪ್‌ಗೆನ್ ಅವರ ಅಧಿಕೃತ ಕ್ವಾರ್ಟರ್ಸ್‌ಗೆ ಜೂನ್ 14 ರ ರಾತ್ರಿ ಅಪರಿಚಿತ ವ್ಯಕ್ತಿಗಳು ಬೆಂಕಿ ಹಚ್ಚಿದ್ದರು.ಕೇಂದ್ರ ಸಚಿವ ಆರ್.ಕೆ.ರಂಜನ್ ಸಿಂಗ್ ಅವರ ಮನೆಯ ಮೇಲೆ ಕೂಡ ಬೆಂಕಿ ಹಚ್ಚಿ ದಾಳಿ ನಡೆದಿತ್ತು. 

ಈಶಾನ್ಯ ರಾಜ್ಯ ಮಣಿಪುರದಲ್ಲಿ ಮೈಟೆಯಿ ಮತ್ತು ಕುಕಿ ಸಮುದಾಯಗಳ ನಡುವಿನ ಜನಾಂಗೀಯ ಹಿಂಸಾಚಾರದಲ್ಲಿ 100 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅನೇಕ ಮನೆಗಳನ್ನು ಸುಟ್ಟುಹಾಕಲಾಗಿದೆ. 

ಘರ್ಷಣೆಯೇನು: ಪರಿಶಿಷ್ಟ ಪಂಗಡದ (ST) ಸ್ಥಾನಮಾನಕ್ಕಾಗಿ ಮೀಟೈ ಸಮುದಾಯದ ಬೇಡಿಕೆಯನ್ನು ಹತ್ತಿಕ್ಕಲು 'ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆ' ಆಯೋಜಿಸಿದ ಹಿನ್ನೆಲೆಯಲ್ಲಿ ಮೇ 3ರಂದು ತೀವ್ರ ಸಂಘರ್ಷ ಏರ್ಪಟ್ಟು ಮಣಿಪುರದಲ್ಲಿ ಹಿಂಸಾಚಾರ ರೂಪ ತಾಳಿತು.

ಮಣಿಪುರದ ಜನಸಂಖ್ಯೆಯ ಶೇಕಡ 53 ರಷ್ಟಿರುವ ಮೈಟೆಯಿ ಜನಾಂಗದವರು ಇಂಫಾಲ್ ಕಣಿವೆಯಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದಾರೆ. ಬುಡಕಟ್ಟು ಜನಾಂಗದವರಾದ ನಾಗಾಗಳು ಮತ್ತು ಕುಕಿಗಳು - ಮಣಿಪುರ ರಾಜ್ಯದ ಜನಸಂಖ್ಯೆಯ ಶೇಕಡಾ 40 ರಷ್ಟಿದ್ದಾರೆ. ಇವರು ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ.

SCROLL FOR NEXT