ನವದೆಹಲಿ: ದೆಹಲಿ ಆಡಳಿತ ಸೇವೆಗಳಿಗೆ ಸಂಬಂಧಿಸಿದ ಕೇಂದ್ರ ಸರ್ಕಾರದ ಸುಗ್ರೀವಾಜ್ಞೆ ಕುರಿತು ಕಾಂಗ್ರೆಸ್‌ನ ನಿಲುವಿನ ಗೊಂದಲದ ನಡುವೆಯೇ, ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಪಾಟ್ನಾದಲ್ಲಿ ನಡೆದ ವಿರೋಧ ಪಕ್ಷಗಳ ಸಭೆಯಲ್ಲಿ ಭಿನ್ನಾಭಿಪ್ರಾಯಗಳನ್ನು ಮರೆತು ಒಗ್ಗಟ್ಟಾಗಿ ಮುನ್ನಡೆಯುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಹೇಳಿದ್ದಾರೆ ಎಂದು ಎಎಪಿ ಮೂಲಗಳು ಶನಿವಾರ ತಿಳಿಸಿವೆ.
"ಅರವಿಂದ ಕೇಜ್ರಿವಾಲ್ ಅವರು ನೇರವಾಗಿ ರಾಹುಲ್ ಗಾಂಧಿಯವರೊಂದಿಗೆ (ಸುಗ್ರೀವಾಜ್ಞೆ ವಿಷಯದ ಬಗ್ಗೆ) ಮಾತನಾಡಿದ್ದಾರೆ ಮತ್ತು ಯಾವುದೇ ಸಮಸ್ಯೆ ಇದ್ದರೆ ಚಹಾ ಕುಡಿಯುವ ಮೂಲಕ ಪರಿಹರಿಸಿಕೊಳ್ಳೊಣ ಎಂದು ಹೇಳಿದ್ದಾರೆ.
ಶುಕ್ರವಾರ ನಡೆದ ಪ್ರತಿಪಕ್ಷಗಳ ಸಭೆಯಲ್ಲಿ, ಕೇಜ್ರಿವಾಲ್ ಅವರು ಭಿನ್ನಾಭಿಪ್ರಾಯಗಳನ್ನು ಮರೆತು ಒಟ್ಟಾಗಿ ಮುನ್ನಡೆಯುವ ಅವಶ್ಯಕತೆಯಿದೆ ಎಂದು ರಾಹುಲ್ ಗಾಂಧಿಗೆ ಹೇಳಿರುವುದಾಗಿ ಅವರ ಪಕ್ಷದ ಮೂಲಗಳು ತಿಳಿಸಿವೆ.
ಪರಿಸ್ಥಿತಿಯನ್ನು ಗಮನಿಸಿದರೆ, ಶಿಮ್ಲಾದಲ್ಲಿ ನಿಗದಿಯಾಗಿರುವ ವಿರೋಧ ಪಕ್ಷಗಳ ಮುಂದಿನ ಸಭೆಯಲ್ಲಿ ಪಾಲ್ಗೊಳ್ಳುವ ಬಗ್ಗೆ ಎಎಪಿ ಇನ್ನೂ ನಿರ್ಧರಿಸಿಲ್ಲ ಎಂದು ಅವರು ಹೇಳಿದ್ದಾರೆ.
ಜುಲೈ 10 ಅಥವಾ 12 ರಂದು ಶಿಮ್ಲಾದಲ್ಲಿ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ಮತ್ತೊಂದು ಪ್ರತಿಪಕ್ಷಗಳ ಸಭೆ ನಡೆಯುವ ಸಾಧ್ಯತೆ ಇದೆ.