ದೇಶ

ಹಿಮಾಚಲ ಪ್ರದೇಶ: ಮಂಡಿಯಲ್ಲಿ ಹಠಾತ್ ಪ್ರವಾಹ, ನೀರಿನಲ್ಲಿ ಕೊಚ್ಚಿ ಹೋದ ವಾಹನಗಳು!

Nagaraja AB

ಮಂಡಿ: ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಹಲವೆಡೆ ನಿನ್ನೆಯಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ  ಅಪಾರ ಹಾನಿಯಾಗಿದೆ. ಅನೇಕ ಪ್ರದೇಶಗಳಲ್ಲಿ ರಸ್ತೆಗಳನ್ನು ಮುಚ್ಚಲಾಗಿದೆ. ಜಿಲ್ಲೆಯ ಜಾಂಜೆಹ್ಲಿ ಎಂಬಲ್ಲಿನ ಹಳ್ಳದಲ್ಲಿ ಹಠಾತ್ ಪ್ರವಾಹದಿಂದಾಗಿ ಹಲವಾರು ವಾಹನಗಳು ಕೊಚ್ಚಿಹೋಗಿವೆ.

ನದಿಯ ಕೆಳಭಾಗದಲ್ಲಿರುವ ಅನೇಕ ಮನೆಗಳು ಅಪಾಯವನ್ನು ಎದುರಿಸುತ್ತಿವೆ, ಜಿಲ್ಲೆಯಾದ್ಯಂತ ಅನೇಕ ಸ್ಥಳಗಳಲ್ಲಿ ಭೂಕುಸಿತದ ಘಟನೆಗಳು ವರದಿಯಾಗಿವೆ. ಗುಡ್ಡಗಾಡು ಪ್ರದೇಶಗಳಲ್ಲಿ ರಾತ್ರಿ ಸುರಿದ ಮಳೆಯಿಂದಾಗಿ ಮಂಡಿ ಮೂಲಕ ಹರಿಯುವ ಬಿಯಾಸ್ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ.  ಮಂತ್ಲಾದಲ್ಲಿ ಮಳೆಯಿಂದಾಗಿ ಭಾರೀ ಹಾನಿಯಾಗಿದೆ. ಮಂಠಾಳ ಪಂಚಾಯಿತಿ ಸಮುದಾಯ ಭವನ ಹಾನಿಯಾಗಿದೆ.

ಸದರ್ ಶಾಸಕ ಅನಿಲ್ ಶರ್ಮಾ ಘಟನಾ ಸ್ಥಳಕ್ಕೆ ಆಗಮಿಸಿ ಸಂತ್ರಸ್ತರನ್ನು ಭೇಟಿ ಮಾಡಿ ಪರಿಸ್ಥಿತಿ ಅವಲೋಕಿಸಿದರು. ಪರಿಹಾರ ಹಾಗೂ ರಸ್ತೆ ದುರಸ್ತಿಗೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಕಳೆದ 24 ಗಂಟೆಗಳಲ್ಲಿ ಮಂಡಿಯಲ್ಲಿ 64.4 ಮಿ.ಮೀ ಮಳೆಯಾಗಿದೆ. ರಾಜ್ಯದ ಇತರ ಭಾಗಗಳಲ್ಲಿಯೂ ಭಾರೀ ಮಳೆಯಿಂದಾಗಿ ಹಾನಿ ವರದಿಯಾಗಿದೆ.

ಕುಲು ಜಿಲ್ಲೆಯಲ್ಲಿ ಹಲವಾರು ವಾಹನಗಳು ಕೊಚ್ಚಿ ಹೋಗಿವೆ. ಕುಲು ಪಟ್ಟಣದ ಬಳಿಯ ಮೊಹಲ್ ನದಿಯಲ್ಲಿ ಎಂಟು ವಾಹನಗಳು ಕೊಚ್ಚಿ ಹೋಗಿವೆ ಎಂದು ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರ (ಡಿಇಒಸಿ) ಚಂಬಾ ಮಾಹಿತಿ ನೀಡಿದ್ದಾರೆ.

SCROLL FOR NEXT