ದೇಶ

'ಆದಿಪುರುಷ' ನಿರ್ಮಾಪಕರಿಗೆ ಅಲಹಾಬಾದ್ ಹೈಕೋರ್ಟ್ ತರಾಟೆ; ಸಿಬಿಎಫ್‌ಸಿ, ಕೇಂದ್ರಕ್ಕೆ ನೋಟಿಸ್

Lingaraj Badiger

ಲಖನೌ: ರಾಮಾಯಣ ಮಹಾಕಾವ್ಯ ಆಧರಿತ ಆದಿಪುರುಷ ಚಿತ್ರದಲ್ಲಿ ಪ್ರಮುಖ ಪಾತ್ರಗಳಾದ ರಾಮ ಮತ್ತು ರಾವಣನನ್ನು ಚಿತ್ರಿಸಿರುವ ರೀತಿ ಬಗ್ಗೆ ಅಲಹಾಬಾದ್ ಹೈಕೋರ್ಟ್‌ನ ಲಖನೌ ಪೀಠ ಮಂಗಳವಾರ ತೀವ್ರ ಕಳವಳ ವ್ಯಕ್ತಪಡಿಸಿದೆ.

ಒಂದು ನಿರ್ದಿಷ್ಟ ಸಮುದಾಯದ ಸಹಿಷ್ಣುತೆಯನ್ನು ಏಕೆ ಪರೀಕ್ಷೆ ಮಾಡುತ್ತೀರಿ? ಎಂದು ಹೈಕೋರ್ಟ್, ಆದಿಪುರುಷ ಚಿತ್ರ ತಯಾರಕರನ್ನು ತೀವ್ರ ತರಾಟಗೆ ತೆಗೆದುಕೊಂಡಿದೆ.

‘ಆದಿಪುರುಷ’ ಚಿತ್ರದ ಸಂಭಾಷಣೆಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಮತ್ತು ಇದು ಪ್ರೇಕ್ಷಕರನ್ನು ಕೆರಳಿಸಿದೆ. ಹೀಗಾಗಿ ಚಿತ್ರವನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್​, ಚಿತ್ರದ ನಿರ್ದೇಶಕ ಓಂ ರಾವತ್​ರನ್ನು ತರಾಟೆಗೆ ತೆಗೆದುಕೊಂಡಿದೆ. ಈ ಪ್ರಕರಣದಲ್ಲಿ ಸಹ ಲೇಖಕ ಮನೋಜ್ ಮುಂತಶಿರ್ ಶುಕ್ಲಾ ಅವರನ್ನು ಕಕ್ಷಿದಾರರನ್ನಾಗಿ ಮಾಡುವಂತೆ ನ್ಯಾಯಾಲಯ ಸೂಚಿಸಿದ್ದು, ಈ ಕುರಿತು ನಾಳೆ ಮಧ್ಯಾಹ್ನದ ಒಳಗೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರ ಹಾಗೂ ಸಿಬಿಎಫ್ ಸಿಗೆ ನೋಟಿಸ್ ಜಾರಿ ಮಾಡಿದೆ.

"ಪುಣ್ಯಕ್ಕೆ ಸಿನಿಮಾ ನೋಡಿದ ಬಳಿಕ ಜನರು ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದಿಲ್ಲ. ಈ ಸಿನಿಮಾದಲ್ಲಿ ಹನುಮಂತ ಮತ್ತು ಸೀತೆ ಏನೂ ಅಲ್ಲವೆಂಬಂತೆ ತೋರಿಸಲಾಗಿದೆ. ನೀವು ಭಗವಾನ್ ರಾಮ, ಲಕ್ಷ್ಮಣ, ಹನುಮಂತ, ರಾವಣನನ್ನು ತೋರಿಸಿ ನಂತರ ಅದು ರಾಮಾಯಣವಲ್ಲ ಎಂದು ಹೇಳೋಕಾಗುತ್ತಾ? ನಮ್ಮ ದೇಶದ ಜನರು, ಯುವಕರು ಬುದ್ಧಿ ಇಲ್ಲದವರು ಅಂದುಕೊಂಡಿದ್ದೀರಾ?" ಎಂದು ಕೋರ್ಟ್​ ಕಿಡಿಕಾರಿದೆ.

"ಚಿತ್ರದಲ್ಲಿನ ಸಂಭಾಷಣೆಗಳು ಒಂದು ದೊಡ್ಡ ಸಮಸ್ಯೆಯಾಗಿದೆ. ರಾಮಾಯಣವು ನಮಗೆ ಒಂದು ಮಾದರಿಯಾಗಿದೆ. ಜನರು ಮನೆಯಿಂದ ಹೊರಡುವ ಮೊದಲು ರಾಮಚರಿತಮಾನಸ ಓದುತ್ತಾರೆ. ಚಲನಚಿತ್ರಗಳು ಕೆಲವು ವಿಷಯಗಳನ್ನು ಮುಟ್ಟಬಾರದು" ಎಂದು ಕೋರ್ಟ್​ ಹೇಳಿದೆ.

SCROLL FOR NEXT