ಪ್ರಧಾನಿ ಮೋದಿ ನಿವಾಸದಲ್ಲಿ ಸಭೆ 
ದೇಶ

ಪ್ರಧಾನಿ ಮೋದಿ ನಿವಾಸದಲ್ಲಿ ತಡರಾತ್ರಿ ಬಿಜೆಪಿ ನಾಯಕರ ಮಹತ್ವದ ಸಭೆ: ಸಂಪುಟ ಪುನಾರಚನೆಗೆ ಸಿದ್ಧತೆ?

2024ರ ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಇತ್ತ ನಿನ್ನೆ ತಡರಾತ್ರಿ ಪ್ರಧಾನಿ ನರೇಂದ್ರ ಮೋದಿ ನಿವಾಸದಲ್ಲಿ ಮಹತ್ವದ ಸಭೆ ನಡೆದಿದ್ದು, ಸಂಪುಟ ಪುನಾರಚನೆ ಕುರಿತು ಸಿದ್ಧತೆ ನಡೆಸಲಾಗಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.

ನವದೆಹಲಿ: 2024ರ ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಇತ್ತ ನಿನ್ನೆ ತಡರಾತ್ರಿ ಪ್ರಧಾನಿ ನರೇಂದ್ರ ಮೋದಿ ನಿವಾಸದಲ್ಲಿ ಮಹತ್ವದ ಸಭೆ ನಡೆದಿದ್ದು, ಸಂಪುಟ ಪುನಾರಚನೆ ಕುರಿತು ಸಿದ್ಧತೆ ನಡೆಸಲಾಗಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.

ಕರ್ನಾಟಕ ಚುನಾವಣೆಯಲ್ಲಿ ಸೋತಿರುವ ಬಿಜೆಪಿ 2024ರ ಲೋಕಸಭೆ ಚುನಾವಣೆಗೆ ಕಾರ್ಯ ತಂತ್ರ ರೂಪಿಸಲು ಬಿಜೆಪಿಯ ಹಿರಿಯ ನಾಯಕರು ಬುಧವಾರ ರಾತ್ರಿ ಸಭೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದಲ್ಲಿ ಸಭೆ ನಡೆದಿದ್ದು, ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಪಕ್ಷದ ಇತರೆ ಕೆಲವು ಹಿರಿಯ ನಾಯಕರು ಭಾಗಿಯಾಗಿದ್ದರು ಎಂದು ಮೂಲಗಳು ತಿಳಿಸಿವೆ.

ಪ್ರಧಾನಿ ಮೋದಿ ಅವರು ಅಮೆರಿಕ ಹಾಗೂ ಈಜಿಪ್ಟ್ ಪ್ರವಾಸ ಮುಗಿಸಿ ಬಂದ ಕೆಲವೇ ದಿನಗಳಲ್ಲಿ ಈ ಸಭೆ ನಡೆದಿದ್ದು, ಒಂದೆಡೆ ವಿರೋಧ ಪಕ್ಷಗಳು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕೆಳಕ್ಕಿಳಿಸಲು ಮಹಾ ಮೈತ್ರಿಕೂಟ ರಚಿಸುವ ಪ್ರಯತ್ನದಲ್ಲಿ ಇರುವಾಗ, ಬಿಜೆಪಿ ಅದಕ್ಕೆ ತಿರುಗೇಟು ನೀಡುವ ಕಾರ್ಯತಂತ್ರ ರೂಪಿಸಲು ಮುಂದಾಗಿದೆ. ಸುಮಾರು ಐದು ಗಂಟೆಗೂ ಹೆಚ್ಚು ಸಮಯ ನಡೆದ ಈ ಸಭೆಯಲ್ಲಿ ಶೀಘ್ರದಲ್ಲಿಯೇ ಕೇಂದ್ರ ಸಂಪುಟದಲ್ಲಿ ಮಹತ್ವದ ಬದಲಾವಣೆಗಳನ್ನು ತರುವ ಬಗ್ಗೆ ಕೂಡ ಸಮಾಲೋಚನೆ ನಡೆಸಲಾಗಿದೆ ಎಂದು ಹೇಳಲಾಗಿದೆ.

ಯುಸಿಸಿ ಬಗ್ಗೆಯೂ ಚರ್ಚೆ
ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ರಾಷ್ಟ್ರವ್ಯಾಪಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲು ಸರ್ಕಾರ ಮುಂದಾಗಲಿದೆ ಎಂದು ತಿಳಿಸಿದ್ದರು. ಸಮಾನ ನಾಗರಿಕ ಕಾನೂನು ಬಿಜೆಪಿಯ ಪ್ರಣಾಳಿಕೆಯಲ್ಲಿ ಸಾಮಾನ್ಯವಾಗಿ ಕಂಡುಬರುವ ಅಂಶವಾಗಿದೆ. ಈ ಬಾರಿ ಚುನಾವಣೆಯಲ್ಲಿ ಪ್ರಮುಖ ವಿಷಯವನ್ನಾಗಿ ಯುಸಿಸಿ ಪ್ರಸ್ತಾಪವಾಗುವ ನಿರೀಕ್ಷೆ ಇದೆ. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಅನುಭವಿಸಿದ ಹೀನಾಯ ಸೋಲು, ಕೇಂದ್ರ ನಾಯಕರಲ್ಲಿ ಕಳವಳ ಮೂಡಿಸಿದೆ. ಈ ವರ್ಷದ ಕೊನೆ ಹಾಗೂ ಮುಂದಿನ ವರ್ಷದಲ್ಲಿ ಲೋಕಸಭೆ ಚುನಾವಣೆ ವೇಳೆ ನಡೆಯಲಿರುವ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ತನ್ನ ಪ್ರಚಾರ ಸ್ವರೂಪವನ್ನು ಬದಲಿಸಲು ಬಿಜೆಪಿ ಆಲೋಚನೆ ನಡೆಸಿದೆ.

4 ರಾಜ್ಯಗಳ ಚುನಾವಣೆ ಮೇಲೆ ಕಣ್ಣು
ಇದಲ್ಲದೆ ಮಧ್ಯಪ್ರದೇಶ, ತೆಲಂಗಾಣ, ರಾಜಸ್ಥಾನ ಮತ್ತು ಛತ್ತೀಸಗಡ ರಾಜ್ಯಗಳಿಗೆ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ನಾಲ್ಕು ರಾಜ್ಯಗಳ ಪೈಕಿ ಮಧ್ಯಪ್ರದೇಶದಲ್ಲಿ ಮಾತ್ರ ಬಿಜೆಪಿ ಅಧಿಕಾರದಲ್ಲಿದೆ. ಮಧ್ಯಪ್ರದೇಶವನ್ನು ಉಳಿಸಿಕೊಳ್ಳುವ ಸವಾಲು ಒಂದೆಡೆಯಾದರೆ, ರಾಜಸ್ಥಾನದ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಇರುವ ಆಂತರಿಕ ಕಲಹವನ್ನು ಬಳಸಿಕೊಂಡು ಬಿಜೆಪಿಯನ್ನು ಪ್ರಬಲಗೊಳಿಸುವುದು ಹಾಗೂ ಇನ್ನೆರಡು ರಾಜ್ಯಗಳಲ್ಲಿ ಆಡಳಿತ ವಿರೋಧಿ ಅಲೆಯನ್ನು ತನ್ನ ಅಸ್ತ್ರವನ್ನಾಗಿ ಉಪಯೋಗಿಸುವುದು ಬಿಜೆಪಿಗೆ ಇರುವ ದೊಡ್ಡ ಗುರಿಯಾಗಿದೆ.

ಈಗಾಗಲೇ ವಿರೋಧ ಪಕ್ಷಗಳು ಬಿಜೆಪಿ ವಿರುದ್ಧ ಮಹಾ ಮೈತ್ರಿಕೂಟ ರಚನೆಯ ತನ್ನ ಉದ್ದೇಶವನ್ನು ಈಡೇರಿಸಿಕೊಳ್ಳಲು ಬಿಹಾರದಲ್ಲಿ ಮೊದಲ ಸಭೆ ನಡೆಸಿದ್ದು, ಮುಂದಿನ ತಿಂಗಳು ಶಿಮ್ಲಾದಲ್ಲಿ ಮತ್ತೊಂದು ಸಭೆ ನಡೆಸಲು ಉದ್ದೇಶಿಸಿವೆ. ಕಾಂಗ್ರೆಸ್ ಜತೆಗೆ ವಿವಿಧ ರಾಜ್ಯಗಳ ಪ್ರಾದೇಶಿಕ ಪಕ್ಷಗಳು ಕೈ ಜೋಡಿಸುತ್ತಿರುವುದು ಕೇಂದ್ರದಲ್ಲಿನ ಆಡಳಿತಾರೂಢ ಬಿಜೆಪಿಗೆ ಸವಾಲಾಗುವ ಸಾಧ್ಯತೆ ಇದೆ. ಹೀಗಾಗಿ ಅದಕ್ಕೆ ಪ್ರತಿತಂತ್ರ ರೂಪಿಸುವುದು ಬಿಜೆಪಿಗೆ ಅಗತ್ಯವಾಗಿದೆ. ಬೆಲೆ ಏರಿಕೆ, ಆಡಳಿತ ವಿರೋಧಿ ಅಲೆ, ವಿವಾದಗಳು ಮುಂತಾದವು ಚುನಾವಣೆಗೂ ಮುನ್ನ ಬಿಜೆಪಿಗೆ ಶಮನ ಮಾಡಬೇಕಾದ ಕೆಲವು ಬೇಗುದಿಗಳಾಗಿವೆ. ಹೀಗಾಗಿ ತಡರಾತ್ರಿ ನಡೆದ ಸಭೆ ಕುತೂಹಲ ಮೂಡಿಸಿದೆ. 

ಚುನಾವಣಾ ಸಿದ್ಧತೆ
ಈ ಡಿಸೆಂಬರ್‌ನಲ್ಲಿ ನಾಲ್ಕು ರಾಜ್ಯಗಳಿಗೆ ವಿಧಾನಸಭೆ ಚುನಾವಣೆ ನಡೆಯಲಿದ್ದು, ಏಪ್ರಿಲ್‌ ಮೇ ನಲ್ಲಿ ಲೋಕಸಭೆಗೆ ಚುನಾವಣೆ ಇದೆ. ಮುಖ್ಯವಾಗಿ ಮುಂದಿನ ಲೋಕಸಭೆ ಚುನಾವಣೆಗೆ ಈಗಿನಿಂದಲೇ ಹೇಗೆ ತಯಾರಿ ನಡೆಸಬೇಕು. ಬಿಜೆಪಿ ಆಡಳಿತವಿರುವ ರಾಜ್ಯಗಳು ಹಾಗೂ ಇತರೆ ರಾಜ್ಯಗಳಲ್ಲಿ ಹೇಗೆ ಕಾರ್ಯತಂತ್ರ ರೂಪಿಸಬೇಕು ಎನ್ನುವ ಸಲಹೆಗಳನ್ನು ಹಿರಿಯರು ನೀಡಿದರು. ಚುನಾವಣೆಯಲ್ಲಿ ನಮ್ಮ ಪ್ರಣಾಳಿಕೆ ಹೇಗಿರಬೇಕು, ಎರಡು ಅವಧಿಯಲ್ಲಿ ಎನ್‌ಡಿಎ ಕೈಗೊಂಡಿರುವ ಸುಧಾರಣೆಗಳು,. ಬಿಜೆಪಿಯ ಕಾರ್ಯತಂತ್ರ, ಪ್ರತಿಪಕ್ಷಗಳ ಕಾರ್ಯಸೂಚಿಗೆ ಸಮರ್ಥವಾಗಿ ಉತ್ತರ ನೀಡುವ ಪಡೆಯನ್ನು ಪ್ರತಿ ರಾಜ್ಯದಲ್ಲೂ ಕಟ್ಟುವ ಬಗ್ಗೆ ಮಾತುಕತೆಗಳು ನಡೆದಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಸೌರಭ್ ಭಾರದ್ವಾಜ್ ಮನೆ ಮೇಲೆ ಇಡಿ ದಾಳಿ; ಮೋದಿ ನಕಲಿ ಪದವಿ ಕುರಿತ ಗಮನ ಬೇರೆಡೆ ಸೆಳೆಯಲು ಯತ್ನ ಎಂದ AAP

SCROLL FOR NEXT