ದೇಶ

ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿಯಾದ ಡಿಸಿಎಂ ಡಿಕೆಶಿ, ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಚರ್ಚೆ

Lingaraj Badiger

ನವದೆಹಲಿ: ದೆಹಲಿ ಪ್ರವಾಸದಲ್ಲಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಗುರುವಾರ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರನ್ನು ಭೇಟಿ ಮಾಡಿದರು.

ಶೆಖಾವತ್ ಅವರನ್ನು ಇಂದು ರಾತ್ರಿ ದೆಹಲಿಯ ಅಕ್ಬರ್ ರಸ್ತೆಯಲ್ಲಿರುವ ಅವರ ನಿವಾಸದಲ್ಲಿ ಭೇಟಿ ಮಾಡಿದ ಡಿಕೆ ಶಿವಕುಮಾರ್ ಅವರು, ಮೇಕೆದಾಟು, ಕಳಸಾ ಬಂಡೂರಿ ಯೋಜನೆ ಸೇರಿದಂತೆ ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳ ಬಗ್ಗೆ ಮತ್ತು ಕಾಮಗಾರಿ ಪ್ರಗತಿ ಕುರಿತು ಚರ್ಚಿಸಿದ್ದಾರೆ ಎನ್ನಲಾಗಿದೆ.

ರಾಜ್ಯದಲ್ಲಿ ಈ ಬಾರಿ ವಾಡಿಕೆಗಿಂತ ಶೇ. 58 ಕಷ್ಟು ಮಳೆ ಕಡಿಮೆಯಾಗಿದ್ದು, ವಿವಿಧ ಜಿಲ್ಲೆಗಳು ಬರ ಪರಿಸ್ಥಿತಿ ಎದುರಿಸುವ ಸಾಧ್ಯತೆ ಇದೆ. ರಾಜ್ಯದ ಎಲ್ಲಾ ಸಮಸ್ಯೆಗಳಿಗೂ ಕೇಂದ್ರ ಸರ್ಕಾರ ಸ್ಪಂದಿಸಬೇಕು ಎಂದು ಇದೇ ಸಂದರ್ಭದಲ್ಲಿ ಡಿಕೆಶಿ ಮನವಿ ಮಾಡಿದ್ದಾರೆ.

ಕೇಂದ್ರ ಸಚಿವರ ಭೇಟಿಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ್ದ ಡಿಕೆಶಿ, ಮೇಕೆದಾಟು ಮಾತ್ರವಲ್ಲ, ರಾಜ್ಯದ ಸಮಗ್ರ ಹಲವು ಯೋಜನೆಗಳ ಬಗ್ಗೆ ಚರ್ಚೆ ಮಾಡಲಾಗುವುದು. ನೀರಾವರಿ ಇಲಾಖೆ ಬಗ್ಗೆ ಸಮಾಲೋಚನೆ ಮಾಡಲಾಗುತ್ತದೆ. ಮೊದಲ ಬಾರಿಗೆ ಸೌಹಾರ್ದಯುತವಾಗಿ ಮಾತುಕತೆ ನಡೆಸಲಿದ್ದೇವೆ ಎಂದು ತಿಳಿಸಿದ್ದರು.

SCROLL FOR NEXT