ದೇಶ

ಗ್ಯಾಸ್ ಬೆಲೆ ಏರಿಕೆಯಿಂದಾಗಿ ಹೋಳಿ ಹಬ್ಬದ ಖಾದ್ಯ ಮಾಡುವುದು ಹೇಗೆಂದು ಜನ ಕೇಳುತ್ತಿದ್ದಾರೆ: ಮಲ್ಲಿಕಾರ್ಜುನ ಖರ್ಗೆ

Ramyashree GN

ನವದೆಹಲಿ: ಹೋಳಿ ಹಬ್ಬಕ್ಕೂ ಮುನ್ನ ಗೃಹಬಳಕೆ ಮತ್ತು ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ ಮಾಡಿರುವ ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬುಧವಾರ ತರಾಟೆಗೆ ತೆಗೆದುಕೊಂಡಿದ್ದಾರೆ.

ಹಿಂದಿಯಲ್ಲಿ ಟ್ವೀಟ್ ಮಾಡಿರುವ ಖರ್ಗೆ, 'ಗೃಹಬಳಕೆಯ ಗ್ಯಾಸ್ ಬೆಲೆ 50 ರೂ., ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ 350 ರೂ. ಏರಿಕೆಯಾಗಿದೆ. ಈಗ ಜನರು ಹೋಳಿಗೆ ಖಾದ್ಯಗಳನ್ನು ಹೇಗೆ ಮಾಡಬೇಕೆಂದು ಕೇಳುತ್ತಿದ್ದಾರೆ. ಈ ಲೂಟಿಯ ಆದೇಶಗಳು ಎಷ್ಟು ದಿನ ಮುಂದುವರಿಯುತ್ತದೆ?' ಎಂದು ಪ್ರಶ್ನಿಸಿದ್ದಾರೆ.

ಮೋದಿ ಸರ್ಕಾರದ ಅವಧಿಯಲ್ಲಿ ಅಧಿಕ ಹಣದುಬ್ಬರದಿಂದ ಜನರು ನಲುಗಿ ಹೋಗುತ್ತಿದ್ದಾರೆ ಎಂದು ಆರೋಪಿಸಿದರು.

ಬುಧವಾರದಿಂದ (ಮಾರ್ಚ್ 1) ಜಾರಿಗೆ ಬರುವಂತೆ ಗೃಹಬಳಕೆಯ ಅಡುಗೆ ಅನಿಲ ಮತ್ತು ವಾಣಿಜ್ಯ ಸಿಲಿಂಡರ್‌ಗಳ ಬೆಲೆಗಳನ್ನು ಕ್ರಮವಾಗಿ ಸಿಲಿಂಡರ್‌ಗೆ 50 ಮತ್ತು 350.50 ರೂ. ಗಳಷ್ಟು ಹೆಚ್ಚಿಸಲಾಗಿದೆ.

ಈ ಏರಿಕೆಯೊಂದಿಗೆ, ದೆಹಲಿಯಲ್ಲಿ ಅಡುಗೆ ಅನಿಲದ ಈಗ ಪ್ರತಿ ಸಿಲಿಂಡರ್‌ಗೆ 1,103 ರೂ ಆಗಿದ್ದರೆ, ವಾಣಿಜ್ಯ ಸಿಲಿಂಡರ್‌ನ ಬೆಲೆ 2,119.50 ರೂ ಆಗಲಿದೆ.

ದೇಶೀಯ ಗ್ಯಾಸ್ ಬೆಲೆಗಳನ್ನು 2022ರ ಜುಲೈನಲ್ಲಿ ಕೊನೆಯ ಬಾರಿಗೆ ಪರಿಷ್ಕರಿಸಲಾಯಿತು. ಗೃಹಬಳಕೆಯ ಗ್ಯಾಸ್ ಸಿಲಿಂಡರ್ 14.2 ಕೆಜಿ ಇರುತ್ತದೆ ಮತ್ತು ವಾಣಿಜ್ಯ ಗ್ಯಾಸ್ ಸಿಲಿಂಡರ್ 19 ಕೆಜಿ ಇರುತ್ತದೆ.

ಪ್ರತಿ ಕುಟುಂಬವು ಒಂದು ವರ್ಷದಲ್ಲಿ ಸಬ್ಸಿಡಿ ದರದಲ್ಲಿ 14.2 ಕೆಜಿಯ 12 ಸಿಲಿಂಡರ್‌ಗಳಿಗೆ ಅರ್ಹವಾಗಿದೆ. ಅದರಾಚೆಗೆ, ಗ್ರಾಹಕರು ಎಲ್‌ಪಿಜಿ ಸಿಲಿಂಡರ್‌ಗಳ ಹೆಚ್ಚುವರಿ ಖರೀದಿಗೆ ಮಾರುಕಟ್ಟೆ ಬೆಲೆಗೆ ಕೊಂಡುಕೊಳ್ಳಬೇಕಾಗುತ್ತದೆ.

SCROLL FOR NEXT