ದೇಶ

ಕ್ಯಾಂಪಸ್ ನಲ್ಲಿ ಹೋಳಿ ಆಚರಣೆ ನಿಷೇಧಿಸಿದ ಬನಾರಸ್ ಹಿಂದೂ ವಿಶ್ವವಿದ್ಯಾಲಯ!

Srinivas Rao BV

ವಾರಣಾಸಿ: ಬನಾರಸ್ ಹಿಂದೂ ವಿಶ್ವವಿದ್ಯಾಲಯ (ಬಿಹೆಚ್ ಯು) ಕ್ಯಾಂಪಸ್ ನಲ್ಲಿ ಹೋಳಿ ಹಬ್ಬವನ್ನು ಆಚರಿಸುವುದನ್ನು ನಿಷೇಧಿಸಿದೆ ಎಂಬ ವರದಿ ವೈರಲ್ ಆಗತೊಡಗಿದೆ.

ಹೋಳಿ ಹಬ್ಬದ ಆಚರಣೆಗೆ ನಿರ್ಬಂಧ ವಿಧಿಸಿರುವ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತವಾಗತೊಡಗಿದ್ದು ಹಿಂದೂ ವಿರೋಧಿ ಕ್ರಮ ಎಂಬ ಟೀಕೆ ಎದುರಾಗಿದೆ.
 
ಆದೇಶದ ಪ್ರಕಾರ ಕ್ಯಾಂಪಸ್ ನಲ್ಲಿ ಸಂಗೀತ ಹಾಕುವುದು ಅಥವಾ ನುಡಿಸುವುದಕ್ಕೂ ನಿರ್ಬಂಧ ವಿಧಿಸಲಾಗಿದ್ದು, ನಿಯಮ ಉಲ್ಲಂಘನೆ ಮಾಡಿದಲ್ಲಿ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ನೊಟೀಸ್ ನಲ್ಲಿ ಎಚ್ಚರಿಕೆ ನೀಡಲಾಗಿದೆ. ಅಷ್ಟೇ ಅಲ್ಲದೇ ನಿಯಮವನ್ನು ಕಡ್ಡಾಯವಾಗಿ ಪಾಲಿಸುವಂತೆ ನೋಡಿಕೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. 

ಹೋಳಿ ಎಂಬುದು ಹಿಂದೂಗಳ ಪವಿತ್ರ ಹಬ್ಬಗಳ ಪೈಕಿ ಒಂದಾಗಿದೆ. ಈ  ಆಚರಣೆಯನ್ನು ವಿಶ್ವವಿದ್ಯಾಲಯ ಹೇಗೆ ನಿರ್ಬಂಧಿಸಲು ಸಾಧ್ಯ ಎಂದು ಪ್ರಶ್ನಿಸಿರುವುದಾಗಿ ವಿಶ್ವ ಹಿಂದೂ ಪರಿಷತ್​ನ ಸ್ಥಳೀಯ ನಾಯಕ ವಿನೋದ್ ಬನ್ಸಲ್ ಹೇಳಿದ್ದಾರೆ. 

ಈ ಬಗ್ಗೆ ಸ್ಪಷ್ಟನೆ ನೀಡಿರುವ ವಿವಿ ಹೋಳಿ ಸಂಭ್ರಮಾಚರಣೆಯಲ್ಲಿ ತೊಡಗಿರುವವರು ಗಲಾಟೆ ಸೃಷ್ಟಿಸುವುದರ ಜತೆಗೆ ಎಲ್ಲರ ಮೇಲೆ ಬಣ್ಣ ಎರಚುವುದು ಗಮನಕ್ಕೆ ಬಂದಿದೆ. ಈ ಹಿಂದೆ ಕಿರುಕುಳದ ಪ್ರಕರಣಗಳೂ ವರದಿಯಾಗಿದ್ದವು ಈ ಹಿನ್ನೆಲೆಯಲ್ಲಿ ಕ್ಯಾಂಪಸ್​ ಒಳಗೆ ಮಾತ್ರ ಹೋಳಿ ಆಚರಿಸಬಾರದು ಎಂದು ನಿರ್ದೇಶಿಸಲಾಗಿದೆ ಎಂದು ಹೇಳಿದೆ.

SCROLL FOR NEXT