ದೇಶ

ಮಹಾರಾಷ್ಟ್ರ: ಬಿಜೆಪಿ ಸಚಿವರಿಗೆ ತಲೆನೋವಾಗಿ ಪರಿಣಮಿಸಿದ ಈರುಳ್ಳಿ ಮತ್ತು ಹತ್ತಿ ಬೆಲೆ ಕುಸಿತ  

Srinivas Rao BV

ಮುಂಬೈ: ಮಹಾರಾಷ್ಟ್ರದಲ್ಲಿ ಈರುಳ್ಳಿ ಹಾಗೂ ಹತ್ತಿಯ ಬೆಲೆ ಕುಸಿತವಾಗುತ್ತಿರುವುದು ಅಲ್ಲಿನ ಸಚಿವರಿಗೆ ತಲೆನೋವಾಗಿ ಪರಿಣಮಿಸಿದೆ.

ದೆಹಲಿಯಲ್ಲಿ ರೈತರ ಪ್ರತಿಭಟನೆ ವೇಳೆ ನೀಡಿದ್ದ ಭರವಸೆಗಳನ್ನು ಪ್ರಧಾನಿಗಳು ಈಡೇರಿಸಬೇಕೆಂದು ಆಗ್ರಹಿಸಿ, ಒಂದೆಡೆ ತಮಿಳುನಾಡಿನ ರೈತರು ತಮ್ಮ ನಾಯಕ ಪಿಆರ್ ಪಾಂಡ್ಯನ್ ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ಸಂಸತ್ ಭವನಕ್ಕೆ ಕಾಲ್ನಡಿಗೆ ಪ್ರಾರಂಭಿಸಿದ್ದರೆ, ಇತ್ತ ಮಹಾರಾಷ್ಟ್ರದಲ್ಲಿ ಬೆಲೆ ಕುಸಿತದಿಂದ ಸಿಟ್ಟಿಗೆದ್ದ ರೈತರು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ವಾಹನದತ್ತ ಈರುಳ್ಳಿಯನ್ನು ತೂರಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. 

ರಾಜ್ಯ ಖಾತೆ ಕೇಂದ್ರ ಸಚಿವರು ಹಾಗೂ ಸಂಸದರಾದ ಭಾರತಿ ಪವಾರ್ ಹಾಗೂ ರಾಜ್ಯ ಕೃಷಿ ಸಚಿವ ಅಬ್ದುಲ್ ಸತ್ತಾರ್ ಅವರಿಗೂ ರೈತರ ಪ್ರತಿಭಟನೆಯ ಬಿಸಿ ತಟ್ಟಿದೆ. 

ಬೆಲೆ ಕುಸಿತದ ನಡುವೆಯೂ ರೈತರಿಗೆ ಕೇಂದ್ರ ಸರ್ಕಾರ ನೆರವು ನೀಡಲು ವಿಫಲವಾಗಿರುವುದಕ್ಕೆ ಈರುಳ್ಳಿ ಹಾಗೂ ಹತ್ತಿ ಬೆಳೆಗಾರರು ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ. 

ಕೇಂದ್ರ ಸಚಿವರಾದ ಭಾರತಿ ಪವಾರ್ ಅವರು ಕೇಂದ್ರ ಸರ್ಕಾರ ಎನ್ಎಎಫ್ಇಡಿ ಮೂಲಕ ಈರುಳ್ಳಿ ಖರೀದಿಸುತ್ತಿದ್ದು, ಈರುಳ್ಳಿ ರಫ್ತಿಗೆ ಯಾವುದೇ ನಿರ್ಬಂಧ ಇಲ್ಲ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಈರುಳ್ಳಿ ಬೆಲೆ ಕುಸಿತ ಕಾಣುತ್ತಿದೆ ಎಂದು ರೈತರಿಗೆ ಮನವರಿಕೆ ಮಾಡಿಕೊಡುವ ಯತ್ನ ಮಾಡಿದ್ದಾರೆ.

ಆದರೆ ರೈತರು ಮಾತ್ರ ಈ ಪರಿಸ್ಥಿತಿಗೆ ಕೇಂದ್ರ ಸರ್ಕಾರದ ತಪ್ಪಾದ ರಫ್ತು- ಆಮದು ನೀತಿಗಳನ್ನು ದೂಷಿಸುತ್ತಿದ್ದಾರೆ. ಕೇಂದ್ರ ಸರ್ಕಾರ ನಿರಂತರವಾಗಿ ಈ ವಿಷಯದಲ್ಲಿ ಬದಲಾವಣೆ ಮಾಡುತ್ತಿರುವುದೇ ರೈತರ ಸಮಸ್ಯೆಗೆ ಕಾರಣ ಎಂದು ರೈತರು ದೂರಿದ್ದಾರೆ.
 

SCROLL FOR NEXT