ದೇಶ

H3N2 ವೈರಾಣು ಪ್ರಕರಣಗಳ ಸಂಖ್ಯೆ ಹೆಚ್ಚಳ ಹಿನ್ನೆಲೆ ಕೇಂದ್ರ ಸರ್ಕಾರದ ಸಭೆ

Srinivas Rao BV

ನವದೆಹಲಿ: ದೇಶದಲ್ಲಿ ಹೆಚ್3ಎನ್ 2 ವೈರಾಣು ಪ್ರಕರಣಗಳ ಸಂಖ್ಯೆ ಹೆಚ್ಚಳ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಉನ್ನತ ಆರೋಗ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿದೆ.
  
ಕೋವಿಡ್-19 ಪ್ರಕರಣಗಳು ದೇಶದಲ್ಲಿ ಕುಸಿತ ಕಾಣುತ್ತಿದ್ದು, ಹೊಸ ವೈರಾಣು ಪ್ರಕರಣಗಳ ಸಂಖ್ಯೆ ಹೆಚ್ಚಳವಾಗತೊಡಗಿದೆ. ಈ ಹಿನ್ನೆಲೆಯಲ್ಲಿ ನಿರಂತರವಾಗಿ ಮುನ್ನೆಚ್ಚರಿಕೆ ವಹಿಸಲು ತಜ್ಞರು ಸಲಹೆ ನೀಡಿದ್ದಾರೆ.
 
ಡಾ. ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಅಜಯ್ ಶುಕ್ಲಾ ಸಹ ಈ ಸಭೆಯಲ್ಲಿ ಭಾಗವಹಿಸಿದ್ದರು.
 
ಸಭೆಯ ಬಳಿಕ ಡಾ. ಶುಕ್ಲಾ ಎಎನ್ಐ ಜೊತೆ ಮಾತನಾಡಿದ್ದು, ಆರ್‌ಎಂಎಲ್, ಲೇಡಿ ಹಾರ್ಡಿಂಜ್, ಸಫ್ತರ್ ಜಂಗ್ ಸೇರಿದಂತೆ ಎಲ್ಲಾ ದೊಡ್ಡ ಕೇಂದ್ರ ಸರ್ಕಾರಿ ಆಸ್ಪತ್ರೆಗಳ ಎಲ್ಲಾ ಹಿರಿಯ ವ್ಯಕ್ತಿಗಳೊಂದಿಗೆ ಸಫ್ದರ್‌ಜಂಗ್ ನಲ್ಲಿರುವ ಆರೋಗ್ಯ ಸೇವೆಗಳ ಮಹಾನಿರ್ದೇಶಕರು ಸಭೆ ನಡೆಸಿದರು ಸಭೆಯಲ್ಲಿ ಔಷಧ, ಶ್ವಾಸಕೋಶದ ಔಷಧ ತಜ್ಞರು ಪಾಲ್ಗೊಂಡಿದ್ದರು ಎಂದು ಮಾಹಿತಿ ನೀಡಿದ್ದಾರೆ.

ನಾವು ದೊಡ್ಡ ಚರ್ಚೆ ನಡೆಸಿದೆವು, ಕೋವಿಡ್-19 ಕಡಿಮೆಯಾಗಿದ್ದರೂ ಬೇರೆ ವೈರಾಣು ಸೋಂಕು ಅದರ ಜಾಗವನ್ನು ತೆಗೆದುಕೊಳ್ಳುತ್ತಿವೆ ಪ್ರಮುಖವಾಗಿ ಹೆಚ್3ಎನ್2 ವೈರಾಣು ಹೆಚ್ಚು ಹರಡುತ್ತಿದೆ ಎಂಬುದರ ಬಗ್ಗೆ ಚರ್ಚೆ ನಡೆದಿದೆ. ಕಡಿಮೆ ರೋಗನಿರೋಧಕತೆ ಇರುವವರಿಗೆ ಹಾಗೂ ಅನೇಕ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವವರನ್ನು ಈ ವೈರಾಣು ಹೆಚ್ಚು ಬಾಧಿಸಬಹುದು ಎಂದು ತಜ್ಞರು ಹೇಳಿದ್ದಾರೆ.
 
ಜನ ಹೆಚ್ಚಿರುವ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದು ಹಾಗೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ವೈದ್ಯರು ಹೇಳಿದ್ದಾರೆ.
 
ಆಸ್ಪತ್ರೆ ಸೇರಿದಂತೆ ವೈರಾಣು ಸೋಂಕು ಅಪಾಯ ಹೆಚ್ಚಿರುವ ಸ್ಥಳಗಳಲ್ಲಿ ಜನರು ಹೆಚ್ಚು ಸೇರುವುದನ್ನು ಸಾಧ್ಯವಾದಷ್ಟೂ ತಪ್ಪಿಸಬೇಕು, ಏಕೆಂದರೆ ಆಸ್ಪತ್ರೆಗಳಿಗೆ ವಿವಿಧ ರೀತಿಯ ಸೋಂಕುಗಳ ಸಮಸ್ಯೆಗಳೊಂದಿಗೆ ಮಂದಿ ಬಂದಿರುತ್ತಾರೆ. ಈ ರೀತಿಯ ಸಂದರ್ಭಗಳಲ್ಲಿ ಮಾಸ್ಕ್ ಧರಿಸುವುದರಿಂದ ಕೋವಿಡ್-19 ಮಾತ್ರವಲ್ಲದೇ ವೈರಲ್ ಸೋಂಕನ್ನೂ ತಡೆಗಟ್ಟಬಹುದು ಎಂದು ಡಾ. ಶುಕ್ಲಾ ಹೇಳಿದ್ದಾರೆ. 

SCROLL FOR NEXT